ಕರ್ನಾಟಕ

karnataka

ETV Bharat / state

ಎಂ. ಬಿ. ಪಾಟೀಲ್ ಮನವಿಗೆ ಸಿಎಂ ಸ್ಪಂದನೆ: ₹140 ಕೋಟಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ - Vijayapura lake water filling project

ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ 16 ಕೆರೆಗಳನ್ನು ತುಂಬಿಸಲು ಆರ್ಥಿಕ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿರುವ ಸಿಎಂ ಯಡಿಯೂರಪ್ಪನವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

CM BSY and M B Patil
ಸಿಎಂ ಬಿಎಸ್​ವೈ ಹಾಗೂ ಎಂ ಬಿ ಪಾಟೀಲ್​

By

Published : Jul 9, 2021, 8:00 PM IST

ಬೆಂಗಳೂರು: ಮಾಜಿ‌ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್ ಮನವಿಗೆ ಸ್ಪಂದಿಸಿರುವ ಸಿಎಂ 140 ಕೋಟಿ ರೂ. ಗಳ ಯೋಜನೆಯನ್ನು ಕೃಷ್ಣಾ ಭಾಗ್ಯ ಜಲನಿಗಮದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ಹೊರಡಿಸಿದ್ದಾರೆ.

ಇಂದು ಬೆಳಗ್ಗೆ ವಿಜಯಪುರ ಜಿಲ್ಲೆಯ ಇಂಡಿ ಭಾಗದ 16 ಕೆರೆಗಳಿಗೆ ತಿಡಗುಂದಿ ಅಕ್ವಾಡಕ್ಟ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಎಂ. ಬಿ. ಪಾಟೀಲ್ ಸಿಎಂರನ್ನು ಭೇಟಿ ಮಾಡಿ, ಬೇಡಿಕೆ ಇಟ್ಟಿದ್ದರು. ಇದಕ್ಕೆ ಸ್ಪಂದಿಸಿರುವ ಸಿಎಂ 140 ಕೋಟಿ ರೂ.ಗಳ ಯೋಜನೆಯನ್ನು ಕೃಷ್ಣಾ ಭಾಗ್ಯ ಜಲನಿಗಮದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ಹೊರಡಿಸಿದ್ದಾರೆ.

ಅನುದಾನ ಬಿಡುಗಡೆ ಆದೇಶ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅತ್ಯಂತ ಬರಪೀಡಿತ ಪ್ರದೇಶದಲ್ಲಿ 16 ಕೆರೆಗಳನ್ನು ತುಂಬಿಸುವ ಯೋಜನೆ ಕಾಮಗಾರಿ ಮಾತ್ರ ಬಾಕಿ ಉಳಿದಿತ್ತು. ಆರ್ಥಿಕ ಅನುಮೋದನೆ ಇಲ್ಲದ ಕಾರಣ ಕಾಮಗಾರಿ ಆರಂಭಗೊಂಡಿರಲಿಲ್ಲ. ಶುಕ್ರವಾರ ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ, ರೈತರ ಹಿತದೃಷ್ಠಿಯಿಂದ ಕೂಡಲೇ ಆರ್ಥಿಕ ಅನುದಾನ ಬಿಡುಗಡೆಗೊಳಿಸುವಂತೆ ವಿನಂತಿಸಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಂಜೆ ವೇಳೆಗೆ ಅನುದಾನ ಬಿಡುಗಡೆ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅದರಂತೆ ಸರ್ಕಾರ ಅಧೀನ ಕಾರ್ಯದರ್ಶಿ ರವೀಂದ್ರ ಕೊಂಡ 140 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಯನ್ನು ಯುಕೆಪಿ ಹಂತ-3ರ ಅಡಿ ವ್ಯವಸ್ಥಾಪಕ ನಿರ್ದೇಶಕರು ಕೃಷ್ಣಾ ಭಾಗ್ಯ ಜಲನಿಗಮ ಇವರಿಗೆ ಮುಂದಿನ ಕ್ರಮ ವಹಿಸುವಂತೆ ತಿಳಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ದೇಶಿಸಿದ್ದಾರೆ.

ಅನುಷ್ಠಾನಗೊಳಿಸಿದ ತೃಪ್ತಿ ಇದೆ: ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಂ. ಬಿ. ಪಾಟೀಲ್, ಜಿಲ್ಲೆಯ ಜನತೆಯ ಪರವಾಗಿ 16 ಕೆರೆಗಳನ್ನು ತುಂಬಿಸಲು ಆರ್ಥಿಕ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿರುವ ಸಿ ಎಂ ಯಡಿಯೂರಪ್ಪನವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಯೋಜನೆ ಜಾರಿಯಾಗುವ ಮೂಲಕ ಜಿಲ್ಲೆಯ ಎಲ್ಲ ಭಾಗಗಳ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿದ ತೃಪ್ತಿ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಾದಾಟದಲ್ಲಿ ಗಾಯಗೊಂಡ ಬಂಡೀಪುರದ ಹುಲಿ ಸೆರೆ: ಚಿಕಿತ್ಸೆಗಾಗಿ ಬನ್ನೇರುಘಟ್ಟಕ್ಕೆ ಸಾಗಿಸುವಾಗ ಮೃತ

ABOUT THE AUTHOR

...view details