ವಿಜಯನಗರ ಜಿಲ್ಲೆಗೆ 6 ತಾಲೂಕು ಸೇರ್ಪಡೆ:ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ - ಜಯನಗರ ಜಿಲ್ಲೆಗೆ 6 ತಾಲೂಕು ಸೇರ್ಪಡೆ
11:40 November 27
ವಿಜಯನಗರ ಜಿಲ್ಲೆಗೆ 6 ತಾಲೂಕುಗಳನ್ನು ಸೇರ್ಪಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು: ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ತಾತ್ಕಾಲಿಕ ಒಪ್ಪಿಗೆ ನೀಡಲಾಗಿತ್ತು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರುವ ವಿಜಯನಗರ ಜಿಲ್ಲೆಗೆ 6 ತಾಲೂಕು ಸೇರ್ಪಡೆ ಮಾಡಲಾಗಿದೆ.
ಹೊಸಪೇಟೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಡಗಲಿ, ಕೂಡ್ಲಿಗಿ ಮತ್ತು ಕೊಟ್ಟೂರು ಸೇರ್ಪಡೆ ಮಾಡಲಾಗಿದ್ದು, ಪ್ರತ್ಯೇಕ ಜಿಲ್ಲೆ ರಚನೆಯ ನಕ್ಷೆ ತಯಾರು ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಕಂದಾಯ ವಿಭಾಗಗಳು, ಉಪ ವಿಭಾಗ ತೆರೆಯಲು ಸಂಪುಟ ಅನುಮೋದನೆ ಜಿಲ್ಲೆ ರಚನೆಗೆ ಅಗತ್ಯ ಅನುದಾನ ಜತೆಗೆ ಕಾನೂನಾತ್ಮಕ ವಿಚಾರಗಳಿಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್ ನೀಡಿದೆ.
ಇನ್ನು ಬಿಬಿಎಂಪಿಗೆ ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಲಕ್ಷ್ಮೀಪುರ ಕಂದಾಯ ಗ್ರಾಮ,ಕಾನ್ಷರಾಂ ನಗರ, ಲಕ್ಷ್ಮೀಪುರದ ಎಲ್ಲ ಬಡಾವಣೆಗಳನ್ನು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ನಂ 12ಕ್ಕೆ ಸೇರ್ಪಡೆಗೊಳಿಸುವುದು ಎಂದು ಇದೇ ವೇಳೆ ಚರ್ಚಿಸಲಾಯಿತು. ಅದೇ ರೀತಿ ಕಗ್ಗಲೀಪುರ ವ್ಯಾಪ್ತಿಯ ಮಲ್ಲಸಂದ್ರ ಹಾಗೂ ಉತ್ತರ ಹಳ್ಳಿ ಮನವರ್ತೆ ಕಾವಲ್ ಗ್ರಾಮದ ಭಾಗಶಃ ಪ್ರದೇಶಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.