ಬೆಂಗಳೂರು: ಜನರಲ್ಲಿ ಬೆಕ್ಕುಗಳ ಬಗ್ಗೆ ಇರುವ ನಕಾರಾತ್ಮಕ ಧೋರಣೆ ಹೋಗಲಾಡಿಸಲೆಂದೇ ನಗರದ ಟೆಕ್ಕಿಯೊಬ್ಬರು ಕ್ಯಾಟ್ ಸ್ಕ್ವಾಡ್ ಎಂಬ ಎನ್ಜಿಒ ಸ್ಥಾಪಿಸಿದ್ದು, ಬೆಕ್ಕುಗಳನ್ನು ರಕ್ಷಿಸಲು ಸದಾ ಮುಂದಿರುತ್ತಾರೆ.
ಬೆಕ್ಕುಗಳು ನಗರದ ಯಾವುದೇ ಜಾಗದಲ್ಲಿ, ಎಂಥಹದ್ದೇ ಸ್ಥಿತಿಯಲ್ಲಿ ಸಿಕ್ಕರೂ ಅವುಗಳ ರಕ್ಷಣೆಗೆ ಈ ಟೆಕ್ಕಿ ವಿಜಯ ಸೀತಾರಾಮ್ ಅಲ್ಲಿಗೆ ಹಾಜರಾಗುತ್ತಾರೆ. ಅನಾಥಗೊಂಡಿರುವ, ಗಾಯಗೊಂಡಿರುವ ಬೆಕ್ಕುಗಳ ಕುರಿತು ಯಾರೇ ಮಾಹಿತಿ ನೀಡಿದರೂ ಅಲ್ಲಿಗೆ ಹೋಗಿ ಆ ಬೆಕ್ಕುಗಳನ್ನು ರಕ್ಷಿಸುತ್ತಿದ್ದಾರೆ.
ಕಳೆದ 6 ವರ್ಷಗಳಿಂದ ಗಾಯಗೊಂಡಂತಹ ಬೆಕ್ಕುಗಳನ್ನು ರಕ್ಷಿಸುತ್ತಾ ಬಂದಿದ್ದು, ಪ್ರಸ್ತುತ ಸುಮಾರು 60 ಬೆಕ್ಕುಗಳು ಇವರ ಮನೆಯಲ್ಲಿವೆ. ಅವುಗಳ ಪೋಷಣೆ ಮಾಡುತ್ತಾ ದಿನದ ಪೂರ್ತಿ ಸಮಯವನ್ನು ಅವುಗಳಿಗೆಂದೇ ಮೀಸಲಿಟ್ಟಿದ್ದಾರೆ.
ಅನಾಥ ಬೆಕ್ಕುಗಳಿಗೆ ಬೆಚ್ಚನೆ ಸೂರು ಒದಗಿಸಿದ್ದಾರೆ ವಿಜಯ ಸೀತಾರಾಮ್ ಎಲ್ಲಕ್ಕೂ ಮಿಗಿಲಾಗಿ ತಮ್ಮಲ್ಲಿರುವ ಬೆಕ್ಕುಗಳನ್ನು ಪ್ರೀತಿಯಿಂದ ಮಕ್ಕಳಂತೆ ನೋಡಿಕೊಳ್ಳುವ ಜನರಿಗೆ ಉಚಿತವಾಗಿ ನೀಡುತ್ತಾರೆ. ಬೆಕ್ಕುಗಳ ರಕ್ಷಣೆ ಮತ್ತು ಪೋಷಣೆಗಾಗಿಯೇ ಬೆಂಗಳೂರು ಕ್ಯಾಟ್ ಸ್ಕ್ವಾಡ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಕಟ್ಟಿರುವ ವಿಜಯ ಇತರೆ ಪ್ರಾಣಿ ದಯಾ ಸಂಘಗಳಿಗೂ ಅಗತ್ಯ ನೆರವನ್ನು ನೀಡುತ್ತಾರೆ. ಜೊತೆಗೆ, ಕರಿ ಬೆಕ್ಕುಗಳ ಬಗ್ಗೆ ಜನರು ಹೊಂದಿರುವ ಮೂಢ ನಂಬಿಕೆ ತೊಲಗಿಸಬೇಕೆಂಬ ವಿಶೇಷ ಕಾಳಜಿ ಹೊಂದಿದ್ದಾರೆ.
ಬೆಕ್ಕುಗಳನ್ನು ದತ್ತು ನೀಡುವ ಸಲುವಾಗಿ ಹಲವು ಕ್ಯಾಂಪ್ಗಳನ್ನು ನಡೆಸಿ, ತಮ್ಮಲ್ಲಿನ ಬೆಕ್ಕುಗಳಿಗೆ ಒಂದೊಳ್ಳೆ ಸೂರು ಕಲ್ಪಿಸಿಕೊಡುತ್ತಿದ್ದಾರೆ. ಮೂಲತಃ ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿರುವ ಇವರು ಬೆಂಗಳೂರು, ಮುಂಬೈ, ಅಬುಧಾಬಿಯ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ದೇಶಕ್ಕೆ ಮರಳಿ ಬಂದ ಬಳಿಕ ಕಾಡು ಪ್ರಾಣಿಗಳ ಸಂರಕ್ಷಣೆಗೂ ದುಡಿಯುತ್ತಿದ್ದಾರೆ.
ಕ್ಯಾಟ್ ಸ್ಕ್ವಾಡ್ ಸಂಸ್ಥೆಯ ಸ್ವಯಂ ಸೇವಕಿ ಸಂಜನಾ ಮಾತನಾಡಿ, ಈವರೆಗೆ ಸುಮಾರು 2,000 ಅನಾಥ ಬೆಕ್ಕುಗಳನ್ನು ರಕ್ಷಿಸಿದ್ದೇವೆ. ದಾನಿಗಳು ನೀಡುವ ಹಣವನ್ನು ಪ್ರಾಣಿಗಳ ಸಂರಕ್ಷಣೆಗೆ ಬಳಸುತ್ತಿದ್ದೇವೆ. ಸಮರ್ಪಣ್ ಸ್ವಯಂ ಸೇವಾ ಸಂಸ್ಥೆಯು ನಮ್ಮ ಜೊತೆ ಕೈಜೋಡಿಸಿದ್ದು, ಅವರ ಜೊತೆಯಾಗಿ ಬೆಕ್ಕುಗಳ ಸಂರಕ್ಷಣೆ ಹಾಗೂ ಪೋಷಣೆ ಮಾಡುತ್ತಾ ಜನರಿಗೆ ದತ್ತು ತೆಗೆದುಕೊಳ್ಳುವುದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ದೇಶದ ಬೇರೆ ಪ್ರಾಣಿ ದಯಾ ಸಂಘ ಸಂಸ್ಥೆಗಳಿಗೂ ನೆರವು ನಿಡುತ್ತಿದ್ದೇವೆ. ದೇಶದ ಎಲ್ಲಾ ನಗರಗಳಲ್ಲಿಯೂ ಸಾಕಷ್ಟು ಪ್ರಾಣಿ ದಯಾ ಸಂಸ್ಥೆಗಳು ಸ್ಥಾಪನೆಯಾಗಬೇಕು ಎಂಬುದು ನಮ್ಮ ಗುರಿ ಎಂದು ತಿಳಿಸಿದರು.
ಕ್ಯಾಟ್ ಸ್ಕ್ವಾಡ್ ಸಂಸ್ಥೆಯ ಮತ್ತೊಬ್ಬ ಸ್ವಯಂ ಸೇವಕಿ ಕೌಸರ್ ಮಾತನಾಡಿ, ಕಪ್ಪು ಬೆಕ್ಕು ದಿನ ಎಂಬುದು ಇತ್ತೀಚೆಗೆ ಬಂದಿದ್ದು. ಕಪ್ಪು ಬೆಕ್ಕುಗಳ ಬಗ್ಗೆ ಇರುವ ಅಂಧ ವಿಶ್ವಾಸವನ್ನು ಹೋಗಲಾಡಿಸುವುದು ನಮ್ಮ ಗುರಿಗಳಲ್ಲೊಂದು ಎಂದು ಹೇಳಿದರು.