ಬೆಂಗಳೂರು: ರಾಜ್ಯಸಭೆ ಹಾಗು ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆಗಾಗಿ ಹೈಕಮಾಂಡ್ ಮಟ್ಟದಲ್ಲಿ ಆಕಾಂಕ್ಷಿಗಳಿಂದ ನಡೆದ ಲಾಬಿಯಂತಹ ಚಟುವಟಿಕೆಯಿಂದ ಎಚ್ಚೆತ್ತುಕೊಂಡಿದ್ದ ಬಿಜೆಪಿ ನಾಯಕರು, ಇದೀಗ ಯಾವುದೇ ಸುಳಿವು ಸಿಗದ ರೀತಿಯಲ್ಲಿ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಿದ್ದಾರೆ.
ರಾಜ್ಯಪಾಲರ ಜೊತೆ ಕೇವಲ 12 ನಿಮಿಷದ ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಮನಿರ್ದೇಶನಕ್ಕೆ ಸಹಿ ಮಾಡುವಂತೆ ಮನವಿ ಮಾಡಿ ಮಾತುಕತೆ ನಡೆಸಿದರು. ಬೆಳಗ್ಗೆ 11.25ಕ್ಕೆ ರಾಜಭವನಕ್ಕೆ ಭೇಟಿ ನೀಡಿದ್ದ ಸಿಎಂ 11.37ಕ್ಕೆ ವಾಪಸ್ ಬಂದರು. ಅಷ್ಟರಲ್ಲೇ ತಮ್ಮ ಪಟ್ಟಿಗೆ ಸಹಿ ಪಡೆದುಕೊಂಡರು. ನಂತರ ವಿಧಾನಸೌಧಕ್ಕೆ11.45 ಕ್ಕೆ ತೆರಳಿ 12.25 ರವರೆಗಿದ್ದು ಅಂಕಿತ ಪಡೆದ ನಾಮನಿರ್ದೇಶಿತರ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಸೂಚನೆ ನೀಡಿದರು. ಸರಿಯಾಗಿ 12.30 ಕ್ಕೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ವಲಯವಾರು ಜನಪ್ರತಿನಿಧಿಗಳ ಸಭೆಯನ್ನು ಸಿಎಂ ಮುಂದುವರೆಸಿದರು. ಇಂದಿನ ಭೇಟಿ ನಾಮನಿರ್ದೇಶನ ವಿಚಾರ ಸಂಬಂಧ ಎಂದು ಯಾರಿಗೂ ಸಣ್ಣ ಸುಳಿವನ್ನೂ ಕೊಡದೆ ಸಿಎಂ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿ ಮುಗಿಸಿದರು.
ನಾಮನಿರ್ದೇಶನಕ್ಕೆ ಪಕ್ಷದ ಒಳಗೂ ಇತ್ತೀಚೆಗೆ ಚರ್ಚೆ ನಡೆದಿದೆ. ಈ ವೇಳೆ ಯಡಿಯೂರಪ್ಪ ಸ್ಪಷ್ಟವಾಗಿ ಎರಡು ಸ್ಥಾನ ತಮಗೆ ಬೇಕು ಎಂದು ತಿಳಿಸಿದ್ದು, ಉಳಿದ ಸ್ಥಾನಕ್ಕೆ ಪಕ್ಷದಿಂದ ಯಾರನ್ನಾದರೂ ಆಯ್ಕೆ ಮಾಡಿ ಎಂದು ಹೇಳಿದ್ದರು. ಅದರಂತೆ ಬಿಜೆಪಿಯಿಂದ 1, ಆರ್ಎಸ್ಎಸ್ ಸೂಚಿತ 2 ಹೆಸರುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಂತಿಮಗೊಳಿಸಿ, ಮೂರು ಹೆಸರುಗಳನ್ನು ಎರಡು ದಿನದ ಕೆಳಗೆ ಸಿಎಂಗೆ ನೀಡಿದ್ದರು. ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿ ಪಟ್ಟಿಯನ್ನು ಕೊಟ್ಟು ನಾಮನಿರ್ದೇಶನ ಸಂಬಂಧ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದರು. ಆ ವೇಳೆಯಲ್ಲೇ ಐದು ಹೆಸರನ್ನು ಅಂತಿಮಗೊಳಿಸಿದ್ದು, ನಾಮನಿರ್ದೇಶನ ಮಾಡುವ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದು ಇಂದು ಅಧಿಸೂಚನೆ ಹೊರಡಿಸಲಾಗಿದೆ.
ಕಳೆದ ಒಂದು ವಾರದಿಂದ ಬಿಜೆಪಿ ಪಾಳಯದಲ್ಲಿ ನಾಮನಿರ್ದೇಶನ ವಿಚಾರದಲ್ಲಿ ಹಲವು ಸುತ್ತಿನ ಸಭೆಗಳನ್ನು ಆಂತರಿಕವಾಗಿ ನಡೆಸಲಾಗಿದೆ. ಆದರೆ ಮಾಹಿತಿಯನ್ನು ಗೌಪ್ಯವಾಗಿ ಇರಿಸಿಕೊಂಡು ಎಲ್ಲಾ ಪ್ರಕ್ರಿಯೆ ನಡೆಸಲಾಗಿದೆ. ಮಾಧ್ಯಮಗಳಿಗೆ ವಿಷಯ ಸೋರಿಕೆಯಾದಲ್ಲಿ ಆಕಾಂಕ್ಷಿಗಳಿಂದ ಲಾಬಿ ಶುರುವಾಗಲಿದೆ ಎನ್ನುವ ಕಾರಣಕ್ಕೆ ಗೌಪ್ಯತೆ ಕಾಯ್ದುಕೊಂಡು ನಾಮನಿರ್ದೇಶನ ಪ್ರಕ್ರಿಯೆಯನ್ನು ನಡೆಸಲಾಗಿದೆ.