ಬೆಂಗಳೂರು:ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಮಯದಲ್ಲಿ ಸಂಪುಟ ಸಭಾಂಗಣದ ಮುಂದೆ ದ್ವಾರಪಾಲಕನಾಗಿ ಬಾಗಿಲು ಕಾಯುತ್ತಿದ್ದ ನರಸಿಂಹಲು ಮಂಗಳವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಡಿ ಗುಂಪಿನ ನೌಕರರಾಗಿ ವಿಧಾನ ಸೌಧದ ಸಮ್ಮೇಳನ ಸಭಾಂಗಣ ಹಾಗೂ ಸಮಿತಿ ಕೊಠಡಿಯಲ್ಲಿ ನಡೆಯುತ್ತಿದ್ದ ಸಚಿವ ಸಂಪುಟ ಸಭೆ ಮತ್ತು ಇತರೆ ಪ್ರಮುಖ ಸಭೆಗಳ ಸಂದರ್ಭದಲ್ಲಿ ಗಣ್ಯಾತಿಗಣ್ಯರಿಗೆ ಕುಡಿಯುವ ನೀರು ತಂದು ಕೊಡುವುದು ಒಳಗೊಂಡಂತೆ ನರಸಿಂಹಲು ಆತಿಥ್ಯ ಸೇವೆ ಸಲ್ಲಿಸುತ್ತಿದ್ದರು.
ಸಚಿವರಿಂದ ಸಂತಾಪ:ನರಸಿಂಹಲು ನಿಧನಕ್ಕೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ. "ಕ್ರಿಯಾಶೀಲತೆ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ನರಸಿಂಹಲು ಒಳ್ಳೆಯ ವ್ಯಕ್ತಿ. ಅವರ ಕಾರ್ಯದಕ್ಷತೆ ಮತ್ತು ಶಿಸ್ತು ಅನುಕರಣೀಯ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ವಿಜಯಪುರ: ಅನಾರೋಗ್ಯದಿಂದ ಯೋಧ ನಿಧನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದು, "ಸದಾ ಲವಲವಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದ ನರಸಿಂಹಲು ಅವರು, ಉತ್ತಮ ಆತಿಥ್ಯ ನೀಡುತ್ತಿದ್ದರು. ಕಳೆದ ವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಎರಡು ದಿನಗಳ ಸಭೆಯಲ್ಲಿ ನನ್ನನ್ನು ಆತ್ಮೀಯವಾಗಿ ಸತ್ಕರಿಸಿದ್ದರು. ನನಗೆ ಸಮಯಕ್ಕೆ ಸರಿಯಾಗಿ ಕುಡಿಯಲು ಬಿಸಿ ನೀರು ತಂದುಕೊಡುತ್ತಿದ್ದ ನರಸಿಂಹಲು ಇತರ ಸಚಿವರ, ಶಾಸಕರ, ಅಧಿಕಾರಿಗಳ ಮೆಚ್ಚುಗೆಗೆ ಸಹ ಪಾತ್ರರಾಗಿದ್ದರು. ನರಸಿಂಹಲು ಅವರ ಅಗಲಿಕೆಯಿಂದ ನಾನು ಓರ್ವ ಕುಟುಂಬ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬ ಸದಸ್ಯರಿಗೆ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಇತ್ತೀಚಿನ ಪ್ರಕರಣ- ಹೃದಯಾಘಾತದಿಂದ ಹೆಡ್ ಕಾನ್ಸ್ಟೇಬಲ್ ನಿಧನ:ಇತ್ತೀಚೆಗೆ ವಿಜಯನಗರ ತಾಲೂಕಿನ ಕಮಲಾಪುರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ ಅವರು ಹೊಸಪೇಟೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಇವರು 2005ರಲ್ಲಿ ಕಾನ್ಸ್ಟೇಬಲ್ ಆಗಿ ನೇಮಕವಾಗಿದ್ದರು. ಕಳೆದ 18 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗಷ್ಟೇ ಬಳ್ಳಾರಿಯ ಲೋಕಾಯುಕ್ತ ಕಚೇರಿಯಿಂದ ಕಮಲಾಪುರ ಠಾಣೆಗೆ ವರ್ಗಾವಣೆಯಾಗಿದ್ದರು. ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದಿದ್ದರು.
ಇದನ್ನೂ ಓದಿ:Heart attack: ವಿಜಯನಗರದಲ್ಲಿ ಹೃದಯಾಘಾತದಿಂದ ಹೆಡ್ ಕಾನ್ಸ್ಟೇಬಲ್ ನಿಧನ