ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಎದುರು ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ನಾಡಪ್ರಭು ಕೆಂಪೇಗೌಡ ಮತ್ತು ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಗಳನ್ನು ವಿಧಾನಸೌಧದ ಎದುರು ಸ್ಥಾಪಿಸುವ ಕುರಿತಾಗಿ ಶನಿವಾರ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಲನಕ್ಷೆ ಪರಿಶೀಲಿಸಿದರು. ನಂತರ ವಿಧಾನಸೌಧ ಎದುರು ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಪ್ರತಿಮೆ ಸ್ಥಾಪಿಸುವ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಹಾಗೂ ಸಮಾಜ ಸುಧಾರಕ ಬಸವಣ್ಣನವರ ಪ್ರತಿಮೆಗಳ ಮಾದರಿ ಸಿದ್ಧಪಡಿಸಿ ವಿಧಾನಸೌಧದ ಮುಂಭಾಗದಲ್ಲಿ ಸೂಕ್ತ ಸ್ಥಳ ನಿಗದಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ ಅವರು ಸಿದ್ಧಪಡಿಸಿಕೊಂಡು ತಂದಿರುವ ನೀಲನಕ್ಷೆ ಮತ್ತು ಪ್ರತಿಮೆಗಳ ಮಾದರಿಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಪ್ರತಿಮೆಗಳನ್ನು ಆದಷ್ಟು ಶೀಘ್ರ ನಿರ್ಮಿಸಿ, ವಿಧಾನಸೌಧದ ಮುಂಭಾಗ ಶಂಕುಸ್ಥಾಪನೆ ನೆರವೇರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ನಾಲ್ಕು ಮೀಟರ್ ಎತ್ತರದ ಈ ಎರಡು ಪುತ್ಥಳಿಗಳನ್ನು ಅಶ್ವಾರೂಢ ಭಂಗಿಗಳಲ್ಲಿ ಸ್ಥಾಪಿಸಬೇಕು ಮತ್ತು ಸುತ್ತಮುತ್ತ ಹಸಿರಿನಿಂದ ಕಂಗೊಳಿಸುವಂತೆ ಹೂವಿನ ಗಿಡಗಳನ್ನು ನೆಡಬೇಕು ಎಂದು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೃಷ್ಣಾರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಮಹಾಪುರುಷರ ಪ್ರತಿಮೆ:ಎರಡು ಪ್ರಬಲ ಸಮುದಾಯಗಳ ಮಹಾಪುರುಷರ ಪುತ್ಥಳಿಯನ್ನು ನಿರ್ಮಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಇದೀಗ ಚುನಾವಣೆ ಹೊಸ್ತಿಲಲ್ಲಿ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಚುರುಕು ನೀಡಿದೆ. ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣ ಸಂಬಂಧ 2021ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಬಳಿಕ ಆಗಿನ ಸಿಎಂ ಯಡಿಯೂರಪ್ಪ ಈ ಕುರಿತಾಗಿ ಸೂಕ್ತ ಪ್ರಸ್ತಾವನೆಯೊಂದಿಗೆ ಕಡತವನ್ನು ಮಂಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದರು.