ಕರ್ನಾಟಕ

karnataka

ETV Bharat / state

ವಿಧಾನ ಪರಿಷತ್​ ಕಲಾಪ: ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ

ವಿಧಾನ ಪರಿಷತ್​ ಕಲಾಪದ ವೇಳೆ ಸದಸ್ಯ ಹರೀಶ್ ಕುಮಾರ್ ಉನ್ನತ ಶಿಕ್ಷಣದ ಬಗ್ಗೆ ಕೇಳಿದ ಪ್ರಶ್ನೆ ಪ್ರಾಥಮಿಕ ಶಿಕ್ಷಣಕ್ಕೆ ವರ್ಗಾವಣೆ ಆಗಿದ್ದಕ್ಕೆ ಕೊಂಚ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ಆಡಳಿತ ಪಕ್ಷದ ನಾಯಕರ ವಿರುದ್ಧ ಪ್ರತಿಪಕ್ಷದ ಸದಸ್ಯರು‌ ಆಕ್ರೋಶ ಹೊರ ಹಾಕಿದರು.

Vidhana Parishath Session-2020
ವಿಧಾನ ಪರಿಷತ್​ ಕಲಾಪ

By

Published : Mar 16, 2020, 11:36 PM IST

ಬೆಂಗಳೂರು: ವಿಧಾನ ಪರಿಷತ್​ ಇಂದಿನ ಕಲಾಪದಲ್ಲಿ ಆಡಳಿತ ಪಕ್ಷಕ್ಕೆ ಪ್ರತಿಪಕ್ಷ ಸದಸ್ಯರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಆಡಳಿತ ಪಕ್ಷದವರು ಉತ್ತರಿಸುವ ಪ್ರಯತ್ನ ಮಾಡಿದರು. ಈ ವೇಳೆ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಪರಸ್ಪರ ವಾಕ್ಸಮರ ನಡೆಯಿತು.

ಕಲಾಪದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಪರಿಸರ ಹಾನಿ ಬಗ್ಗೆ ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪೂರ್ ಪ್ರಶ್ನೆಗೆ ಉತ್ತರಿಸಿದ ಸಚಿವ ಆನಂದ್​ ಸಿಂಗ್​, ಈಗಾಗಲೇ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಸೂಕ್ತ ಪ್ರಕರಣ ದಾಖಲಿಸಿ 80.54 ಲಕ್ಷ ರೂ. ದಂಡ ವಸೂಲಿ ಮಾಡಿ ನಷ್ಟಕ್ಕೆ‌ ಒಳಗಾದ ರೈತರಿಗೆ ನೀಡಿದ್ದೇವೆ ಎಂದರು. ಈ ಬಗ್ಗೆ ಸದಸ್ಯ ಆರ್.ಬಿ.ತಿಮ್ಮಾಪೂರ್ ವಿವರಣೆ ಕೇಳಿದಾಗ, ನೇರವಾಗಿ ಜಿಲ್ಕಾಧಿಕಾರಿ‌ ಮೂಲಕ ರೈತರಿಗೆ ಪರಿಹಾರ ವಿತರಿಸಿದ್ದೇವೆ. ಇದಾದ ಬಳಿಕವೂ ಸ್ಥಳೀಯ ರೈತರನ್ನು ಕರೆಸಿ ಸಭೆ ನಡೆಸಿ ಪರಿಹಾರ ಸೂಚಿಸುತ್ತೇವೆ ಎಂದರು.

ಸದಸ್ಯ ಹರೀಶ್ ಕುಮಾರ್ ಉನ್ನತ ಶಿಕ್ಷಣದ ಬಗ್ಗೆ ಕೇಳಿದ ಪ್ರಶ್ನೆ ಪ್ರಾಥಮಿಕ ಶಿಕ್ಷಣಕ್ಕೆ ವರ್ಗಾವಣೆ ಆಗಿದ್ದಕ್ಕೆ ಕೊಂಚ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಡಳಿತ ಪಕ್ಷದ ನಾಯಕರ ವಿರುದ್ಧ ಪ್ರತಿಪಕ್ಷದ ಸದಸ್ಯರು‌ ಆಕ್ರೋಶ ಹೊರ ಹಾಕಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯರು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿರುವ ಹಿನ್ನೆಲೆ ನಂತರ ಉತ್ತರಿಸಲಿದ್ದಾರೆ ಎಂದು ತಿಳಿಸಿದರು.

ಸದಸ್ಯ ಅಪ್ಪಾಜಿಗೌಡ ಮಂಡ್ಯ ಜಿಲ್ಲೆಯ ಜನೆರಿಕ್ ಔಷಧ ಮಳಿಗೆಗಳ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಶ್ರೀರಾಮುಲು ಉತ್ತರ ನೀಡಿದರು. ಸ್ಥಳೀಯರಿಗೆ ಉದ್ಯೋಗ ನೀಡಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಈ ಸಂಬಂಧ ಸಭೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ಇತ್ತರು. ಶಾಸಕ ಆರ್.ಪ್ರಸನ್ನ ಕುಮಾರ್, ಡಿ. ದೇವರಾಜ್ ಅರಸು ನಿಗಮದಿಂದ ಕೊಳವೆ ಬಾವಿ ಕೊರೆಸಿರುವ ಮಾಹಿತಿ ಕೇಳಿದರು. ಈ ವೇಳೆ ಸಚಿವ ಶ್ರೀರಾಮುಲು ಉತ್ತರಿಸಿದರು. ಸಚಿವರ ಉತ್ತರಕ್ಕೆ ಕಾಂಗ್ರೆಸ್ ಸದಸ್ಯ ಹೆಚ್.ಎಂ.ರೇವಣ್ಣ ಸೇರಿದಂತೆ ಹಲವು ಸದಸ್ಯರು ಉತ್ತರ ಸಮರ್ಪಕವಾಗಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆ‌ ನಂತರ ಸಚಿವರು ಈ ಸಂಬಂಧ ಸಮಿತಿ ರಚಿಸಿ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುತ್ತೇವೆ ಎಂದು ಭರವಸೆ ಕೊಟ್ಟರು.

ಕಾಂಗ್ರೆಸ್ ಸದಸ್ಯೆ ಡಾ. ಜಯಮಾಲಾ ಸ್ಥನ ಕ್ಯಾನ್ಸರ್ ಕುರಿತು ವಿಚಾರ ಮಂಡಿಸಿದರು. ಕ್ಯಾನ್ಸರ್ ವ್ಯಾಕ್ಸಿನೇಷನ್ ಬಂದಿದೆ. 15 ವರ್ಷ ಒಳಗಿನ ಮಕ್ಕಳಿಗೆ ಇದನ್ನು ಉಚಿತವಾಗಿ ನೀಡಬೇಕು. ಕ್ಯಾನ್ಸರ್ ತಪಾಸಣಾ ರೇಡಿಯೇಷನ್ ಕೇಂದ್ರ ತೆರೆಯಬೇಕು ಎಂದರು. ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ಸದಸ್ಯರು, ಸ್ತನ ಕ್ಯಾನ್ಸರ್ ಜಾಗೃತಿ, ಕ್ಯಾನ್ಸರ್ ಪತ್ತೆ ಹಾಗೂ ತಪಾಸಣೆಗೆ ಅಗತ್ಯವಿರುವ ಎಲ್ಲಾ 10 ಸರ್ಕಾರಿ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಯಂತ್ರವಿದೆ. ಇದರ ಜತೆಗೆ ಮೆಮೋಗ್ರಫಿ ಯಂತ್ರ ತರಿಸಲು ಕ್ರಮ ಕೈಗೊಳ್ಳಲಾಗಿದೆ. 17 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಇದೆ. ಇಲ್ಲಿ ಸಹ ರೇಡಿಯೋ ಥೆರಫಿ, ಮೆಮೋಗ್ರಫಿ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ಆಧುನಿಕ ಚಿಕಿತ್ಸೆಗೆ ಅಗತ್ಯವಿರುವ ಯಂತ್ರೋಪಕರಣಗಳಿಗೆ ಇಲಾಖೆ ಕ್ರಮ ವಹಿಸಲಾಗಿದೆ. ವ್ಯಾಕ್ಸಿನೇಷನ್ ಒಂದು ಇಂಜೆಕ್ಷನ್​​ಗೆ 2.5 ಸಾವಿರ ರೂ. ಆಗಲಿದೆ. ಮೂರು ವ್ಯಾಕ್ಸಿನೇಷನ್ ಉಚಿತವಾಗಿ ನೀಡುವುದು ಕಷ್ಟ. ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಇದರಿಂದ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಭರವಸೆ ಕೊಟ್ಟರು.

ಶೂನ್ಯ ವೇಳೆಯಲ್ಲಿ ಹಲವು ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ತಿಪ್ಪೇಸ್ವಾಮಿ, ಲೆಹರ್ ಸಿಂಗ್, ಎಂ.ನಾರಾಯಣಸ್ವಾಮಿ ಮತ್ತಿತರ ಸದಸ್ಯರ ಪ್ರಶ್ನೆಗೆ ಉತ್ತರ ನೀಡಲಾಯಿತು. ನಂತರ ಪರಿಷತ್ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.

ABOUT THE AUTHOR

...view details