ಬೆಂಗಳೂರು: ವಿಧಾನ ಪರಿಷತ್ನಲ್ಲಿ ಸಂಖ್ಯಾಬಲದ ಮೇಲೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ, ಜೆಡಿಎಸ್ ಸಾಥ್ ನೀಡಿದ ಹಿನ್ನೆಲೆ ಸಭಾಪತಿ ಆಯ್ಕೆಗೆ ಚುನಾವಣೆ ಎದುರಾಗಿದೆ. ಕಳೆದ ಕೆಲ ದಿನದಿಂದ ಸಭಾಪತಿಗಳಾಗಿದ್ದ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಕೆಳಗಿಳಿಸಲು ನಡೆಯುತ್ತಿದ್ದ ಪ್ರಯತ್ನಕ್ಕೆ ಕಳೆದ ಗುರುವಾರ ಫಲ ಸಿಕ್ಕಿದೆ.
ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಅವರು ಸಭಾಪತಿ ಸ್ಥಾನದಿಂದ ಕೆಳಗಿಳಿದಿದ್ದು, ನೂತನ ಸಭಾಪತಿ ಆಯ್ಕೆಗೆ ಮಂಗಳವಾರ ಚುನಾವಣೆ ನಡೆಯಲಿದೆ. ನಾಳೆ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಜೆಡಿಎಸ್ ವತಿಯಿಂದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅಭ್ಯರ್ಥಿಯಾಗಲಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಬೆಂಬಲದೊಂದಿಗೆ ಉಪ ಸಭಾಪತಿಯನ್ನಾಗಿ ತಮ್ಮ ಪಕ್ಷದ ಸದಸ್ಯ ಪ್ರಾಣೇಶ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಿಜೆಪಿ, ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಬದಲಾಗಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲಿದೆ.
ಏಕಾಂಗಿಯಾಗಿ ಸಭಾಪತಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರದ ಬಿಜೆಪಿ, ಇನ್ನೊಂದು ವರ್ಷ ಜೆಡಿಎಸ್ ಜತೆ ಸಖ್ಯ ಬೆಳೆಸಿ ನಂತರ ಸ್ವತಂತ್ರ ಬಲದ ಮೇಲೆ ಸಭಾಪತಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಮುಂದಿನ ಜನವರಿ ವೇಳೆಗೆ ಸಾಕಷ್ಟು ಸ್ಥಾನ ಖಾಲಿ ಆಗಲಿದ್ದು, ಆ ವೇಳೆಗೆ ತಾವು ಪೂರ್ಣ ಬಹುಮತ ಹೊಂದಿರುತ್ತೇವೆ ಎನ್ನುವ ವಿಶ್ವಾಸ ಬಿಜೆಪಿಯದ್ದು.
ಕಾಂಗ್ರೆಸ್ ಅಭ್ಯರ್ಥಿ:ಇಂದು ಬೆಂಗಳೂರಿನಲ್ಲಿ ಸಭೆ ನಡೆಸಿರುವ ಕಾಂಗ್ರೆಸ್ ಪಕ್ಷ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಹಿರಿಯ ಸದಸ್ಯ ನಜೀರ್ ಅಹಮದ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಉಪಸಭಾಪತಿ ಚುನಾವಣೆಯಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಸೋತಿತ್ತು. ಈ ಸಾರಿಯೂ ಸೋಲು ನಿರೀಕ್ಷಿತ. ಆದರೆ ಚುನಾವಣೆ ಆಗಲಿ ಎಂಬ ಉದ್ದೇಶದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆ ಎನ್ನಲಾಗಿದೆ.