ಬೆಂಗಳೂರು:ದೇಶದ ಗಾಯನ ಲೋಕದ ಮೇರು ಪ್ರತಿಭೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ವಿಧಾನ ಪರಿಷತ್ ಸಂತಾಪ ಸೂಚಿಸಿತು. ಅಗಲಿದ ಹಿರಿಯ ಗಾಯಕ ಎಸ್ಪಿಬಿ ಅವರು ಗಾಯನ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ಈ ವೇಳೆ ಈಟಿವಿಯಲ್ಲಿ ಪ್ರಸಾರವಾಗಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಜನಪ್ರಿಯತೆ ಪ್ರಸ್ತಾಪ ಮಾಡಲಾಯಿತು. ವಿಧಾನ ಪರಿಷತ್ನ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚನಾ ಗೊತ್ತುವಳಿ ಮಂಡನೆ ಮಾಡಿದರು.
ಬಾಲ್ಯದಲ್ಲೇ ಸಂಗೀತದ ಆಸಕ್ತಿಯನ್ನು ಹೊಂದಿ, ಗಾಯನ ಲೋಕದಲ್ಲಿ ಮೇರು ಶಿಖರವಾಗಿ ಬೆಳೆದರು. 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ ಅವರು, ಗಾಯನ, ನಟನೆ, ನಿರ್ದೇಶನ, ಸಂಗೀತ ಸಂಯೋಜನೆ, ಕಂಠದಾನ ಹೀಗೆ ಎಲ್ಲಾ ಪ್ರಕಾರದಲ್ಲಿಯೂ ತೊಡಗಿಕೊಂಡಿದ್ದರು. ಒಂದೇ ದಿನದಲ್ಲಿ 21 ಹಾಡು ಹಾಡಿ ಕನ್ನಡದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಒಂದು ದಶಕದ ಕಾಲ ನಡೆದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಮುಂದಿನ ಜನ್ಮ ಕನ್ನಡದಲ್ಲೇ ಎಂದು ಅವರು ಹೇಳಿದ್ದರು. ಕನ್ನಡಿಗರಿಂದ ಅಪಾರ ಪ್ರೇಮ ಸಂಪಾದಿಸಿದ್ದಾರೆ. ಅವರ ನಿಧನದಿಂದ ಭಾರತೀಯ ಚಿತ್ರರಂಗದ ಮೇರು ಗಾನ ಗಂಧರ್ವ ಅಸ್ತಂಗತವಾಗಿದೆ ಎಂದು ಸಭಾಪತಿಗಳು ಎಸ್ಪಿಬಿಯನ್ನು ನೆನೆದರು.
ಗೊತ್ತುವಳಿ ಬೆಂಬಲಿಸಿ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಅವರೇ ರಚಿಸಿದ್ದ ಹಾಡು ಹಾಡಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದರು. ಎಲ್ಲಾ ಭಾಷೆಯ ಭಾವನೆ ಅರ್ಥ ಮಾಡಿಕೊಂಡು ಹಾಡುವ ಏಕೈಕ ಗಾಯಕ ಬಾಲಸುಬ್ರಹ್ಮಣ್ಯಂ ಆಗಿದ್ದರು. ಅವರು ಧ್ವನಿಯಾಗಿದ್ದರು, ನಾವು ಆತ್ಮವಾಗಿದ್ದೇವೆ ಎಂದು ಸ್ವತಃ ಡಾ. ರಾಜ್ ಕುಮಾರ್ ಹೇಳುತ್ತಿದ್ದರು. ಸರ್ಕಾರ ಅವರ ಮುಂದಿನ ಕನಸುಗಳು, ಯೋಜನೆಗಳ ಜಾರಿ ಕಾಲಘಟ್ಟದಲ್ಲಿ ಇದೆ ಎನ್ನುವ ಪ್ರಸ್ತಾಪ ಮಾಡಿ ಸಂತಾಪ ಸೂಚಿಸಿದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ದೇಶದ ಕೋಟ್ಯಂತರ ಸಂಗೀತ ಪ್ರೇಮಿಗಳ ಪ್ರಾರ್ಥನೆ ಫಲಿಸಲಿಲ್ಲ. ಶ್ರೇಷ್ಠ ಗಾಯಕ ನಮ್ಮನ್ನು ಬಿಟ್ಟು ಅಗಲಿದ್ದಾರೆ. ದೇಶದ ಸಂಗೀತ ಕ್ಷೇತ್ರ ಸ್ತಬ್ಧವಾಗಿದೆ. ಗಾಯನದ ಉಸಿರು ನಿಂತಿದೆ ಎನ್ನುವ ಭಾವನೆ ಕಾಡುತ್ತಿದೆ. ದಕ್ಷಿಣ ರಾಜ್ಯಗಳು, ಹಿಂದಿ ಸೇರಿದಂತೆ 17 ಭಾಷೆಯಲ್ಲಿ 40 ಸಾವಿರ ಹಾಡು ಹಾಡಿದ್ದು, ಇದರಲ್ಲು 15 ಸಾವಿರ ಹಾಡು ಕನ್ನಡ ಭಾಷೆಯದ್ದು ಎನ್ನುವುದು ಹೆಮ್ಮೆಯಾಗುತ್ತದೆ. ನಾಲ್ಕು ಭಾಷೆಯಲ್ಲಿ ಆರು ಬಾರಿ ರಾಷ್ಟ್ರ ಪ್ರಶಸ್ತಿ, ಆಂಧ್ರ ಪ್ರದೇಶದಿಂದ 25 ಬಾರಿ ನಂದಿ ಪ್ರಶಸ್ತಿ ಪಡೆದಿದ್ದಾರೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮ ರಾಜ್ಯದ ಮನೆ ಮಾತಾಗಿತ್ತು ಎಂದು ಸ್ಮರಿಸಿ ಸಂತಾಪ ಸೂಚಿಸಿದರು. ನಂತರ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ನಂತರ 10 ನಿಮಿಷಗಳ ಕಾಲ ಸದನವನ್ನು ಮುಂದೂಡಿಕೆ ಮಾಡಿ ಗೌರವ ಸಲ್ಲಿಸಲಾಯಿತು.
ಸದನದಲ್ಲಿ ಮೈ ಮರೆತ ಲೆಹರ್ ಸಿಂಗ್:
ಸಂತಾಪ ಸೂಚನೆ ವೇಳೆ ಮೈ ಮರೆತ ಬಿಜೆಪಿ ಸದಸ್ಯ ಲೆಹರ್ ಸಿಂಗ್ ನಿದ್ದೆಗೆ ಜಾರಿದ್ದರು. ಸಂತಾಪ ಸೂಚಿಸಿ ಎದ್ದು ನಿಂತು ಗೌರವ ಸಲ್ಲಿಕೆ ಮಾಡುತ್ತಿದ್ದರೂ ನಿದ್ದೆಯಲ್ಲಿಯೇ ಇದ್ದರು. ಬಳಿಕ ಎಚ್ಚೆತ್ತು ತರಾತುರಿಯಲ್ಲಿ ಎದ್ದು ನಿಂತು ಗೌರವ ಸಲ್ಲಿಕೆ ಮಾಡಿದರು.