ಬೆಂಗಳೂರು:ಮಹಾನವಮಿ ಪೂಜೆಯ ಅಂಗವಾಗಿ ಶನಿವಾರ ವಿಧಾನಸೌಧದ ಶಾಸಕ, ಸಚಿವರ ಹಾಗೂ ವಿವಿಧ ಕೊಠಡಿಗಳನ್ನು ಹೂಗಳಿಂದ ಶೃಂಗರಿಸಲಾಗಿದೆ.
ಮಹಾನವಮಿ ಪೂಜೆ.. ಶಕ್ತಿಸೌಧಕ್ಕೆ ನವ ವಧುವಿನ ಸಿಂಗಾರ..
ಬೆಂಗಳೂರಿನ ವಿಧಾನಸೌಧದಲ್ಲಿ ಮಹಾನವಮಿ ಅಂಗವಾಗಿ ಎಲ್ಲ ಶಾಸಕ, ಸಚಿವರ ಹಾಗೂ ಮುಖ್ಯಮಂತ್ರಿಗಳ ಕೊಠಡಿಗಳನ್ನು ಶೃಂಗಾರ ಮಾಡಿ, ಪೂಜೆ ಮಾಡಲಾಯಿತು.
ಸೋಮವಾರ ಮಹಾನವಮಿ ಹಾಗೂ ಆಯುಧ ಪೂಜೆ ಇದ್ದು, ಎರಡು ದಿನ ಮೊದಲೇ ವಿಧಾನಸೌಧದಲ್ಲಿ ಆಯುಧ ಪೂಜೆಯ ಸಂಭ್ರಮಾಚರಣೆ ಮಾಡಲಾಯಿತು. ಸೋಮವಾರ ಮಹಾನವಮಿ ಇರುವುದರಿಂದ ಸರ್ಕಾರಿ ಕಚೇರಿಗಳು ರಜೆ ಹಾಗೂ ನಾಳೆ ಭಾನುವಾರವಿರುವುದರಿಂದ ಶನಿವಾರವೇ ಎಲ್ಲ ಪೂಜಾ ಕಾರ್ಯಕ್ರಮಗಳನ್ನು ಮುಗಿಸಲಾಗಿದೆ.ವಿಧಾನಸೌಧ ಹಾಗೂ ವಿಕಾಸಸೌಧದ ಮಹಿಳಾ ಸಿಬ್ಬಂದಿ ಪಟ್ಟೆ ಸೀರೆ ಹಾಕಿಕೊಂಡು, ತಮ್ಮ ಕಚೇರಿಗಳನ್ನು ಶೃಂಗರಿಸಿಕೊಳ್ಳುತ್ತಿದ್ದರು. ವಿಧಾನಸೌಧದ ಕಾರಿಡಾರ್ಗಳು ಬಣ್ಣ ಬಣ್ಣದ ರಂಗೋಲಿಗಳಿಂದ ಕಂಗೊಳಿಸುತ್ತಿದ್ದವು. ಒಂದೆಡೆ ಮಹಿಳಾ ಸಿಬ್ಬಂದಿ ರಂಗೋಲಿ ಬಿಡಿಸುತ್ತಿದ್ದು, ಇನ್ನೊಂದೆಡೆ ಸಚಿವರು, ಅಧಿಕಾರಿಗಳ ಕಚೇರಿಗಳ ದ್ವಾರವನ್ನು ತೋರಣ, ಹೂಗಳಿಂದ ಅಲಂಕರಿಸಲಾಗುತ್ತಿತ್ತು.
ವಿಧಾನಸೌಧದಲ್ಲಿನ ಸಿಎಂ ಯಡಿಯೂರಪ್ಪ ಕೊಠಡಿ, ಸಚಿವ ಸಂಪುಟ ಸಭೆ ಕೊಠಡಿ ಸೇರಿದಂತೆ ಎಲ್ಲ ಸಚಿವರ ಕೊಠಡಿಗಳು ರಂಗೋಲಿ, ಹೂ ಅಲಂಕಾರಗಳಿಂದ ನಳನಳಿಸುತ್ತಿವೆ.