ಬೆಂಗಳೂರು: ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಅಳವಡಿಸಿಕೊಳ್ಳುವ ವೇಳೆ ಯಾವುದೇ ಕಾರಣಕ್ಕೂ ಇರುವ ಹಾಲಿ ಅಂಗನವಾಡಿ ಕಾರ್ಯಕರ್ತೆಯರನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ, ಇರುವವರಿಗೇ ಅಗತ್ಯ ತರಬೇತಿ ನೀಡಿ ಅವರನ್ನೇ ನಾವು ಅಪ್ಡೇಟ್ ಮಾಡಿಕೊಂಡು ಮುಂದುವರೆಯುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿ ನಾವು ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೆ. ಈ ವೇಳೆ ಹೊಸದಾಗಿ ಶಿಕ್ಷಕರನ್ನು ಅಂಗನವಾಡಿ ಕೇಂದ್ರಗಳಿಗೆ ನೇಮಕ ಮಾಡುವುದಿಲ್ಲ, ಹೊಸ ಶಿಕ್ಷಣ ನೀತಿ ಪ್ರಕಾರ ನಾವು ಇರುವವರಿಗೇ ತರಬೇತಿ ಕೊಟ್ಟು ನಂತರ ಮುಂದುವರೆಯಲಿದ್ದೇವೆ.
ಮೊದಲು ಕೇಂದ್ರ ಜಾರಿ ಮಾಡಲಿದೆ ಅದಾದ ನಂತರ ನಾವು ಜಾರಿ ಮಾಡುತ್ತೇವೆ. ಈ ವೇಳೆ, ಅಂಗನವಾಡಿ ಕಾರ್ಯಕರ್ತೆಯರ ತೆಗೆಯುವ ಪ್ರಶ್ನೆಯೇ ಇಲ್ಲ, ಇರುವವರಿಗೆ ಹೊಸ ನೀತಿಯಂತೆ ಅಪ್ಡೇಟ್ ಮಾಡುತ್ತೇವೆ, 6 ತಿಂಗಳಿನಿಂದ ಒಂದು ವರ್ಷದ ಡಿಪ್ಲೋಮಾ ತರಬೇತಿ ನೀಡಲಿದ್ದೇವೆ, ಸಮಿತಿಗಳನ್ನು ರಚನೆ ಮಾಡಿ ನಂತರ ನಾವು ಯೋಜನೆ ಜಾರಿ ಮಾಡಲಿದ್ದೇವೆ ಎಂದರು.
48 ವರ್ಷ ಆಗಿರುವ ಸಾಕಷ್ಟು ಕಾರ್ಯಕರ್ತೆಯರು ಇದ್ದಾರೆ ಅವರ ಬಗ್ಗೆ ಏನು ಮಾಡಬಹುದು ಎನ್ನುವ ಕುರಿತು ಗಂಭೀರ ಚರ್ಚೆ ಮಾಡಲಿದ್ದೇವೆ ಅವರ ವಿಚಾರದಲ್ಲಿಯೂ ನಾವು ಕಾಳಜಿ ಹೊಂದಿದ್ದೇವೆ, ಅವರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಇನ್ನು ಅಂಗನವಾಡಿ ಕಟ್ಟಡಗಳ ಕೊರತೆ ಇದ್ದು, 1,877 ಹೊಸ ಕಟ್ಟಡಕ್ಕಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದೇವೆ, ಅಗತ್ಯ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಿದ್ದೇವೆ ಎಂದರು.
ಟ್ರೇಡ್ ಲೈಸೆನ್ಸ್ ಅಕ್ರಮ ಪರಿಶೀಲನೆ:ವರ್ತಕರು ವಹಿವಾಟು ನಡೆಸಲು ಪಡೆಯಬೇಕಿರುವ ಟ್ರೇಡ್ ಲೈಸನ್ಸ್ ಸರಳೀಕರಣ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಡಿ.ಎಸ್.ಅರುಣ್, ಟ್ರೇಡ್ ಲೈಸೆನ್ಸ್ ಸರಳೀಕರಣ ಮಾಡಬೇಕು, ಅಪಾಯಕಾರಿ ಸಾಧ್ಯತೆ ಇದ್ದಲ್ಲಿ ಮಾತ್ರ ಅನುಮತಿ ಪಡೆಯಬೇಕು, 25 ಕೋಟಿ ವಸೂಲಿಗೆ 250-300 ಕೋಟಿ ಭ್ರಷ್ಟಾಚಾರ ನಡೆಯುತ್ತಿದೆ. ಯಾರಿಗೆ ಅಗತ್ಯವಿದೆಯೋ ಅವರಿಂದ ಮಾತ್ರ ಲೈಸೆನ್ಸ್ ಪಡೆಯುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಬೈರತಿ ಬಸವರಾಜ, ವಹಿವಾಟು ನಡೆಸುವವರಿಗೆ ಶುಲ್ಕ ಪಡೆದು ಐದು ವರ್ಷಕ್ಕೆ ಪರವಾನಗಿ ನೀಡುವ ಪರಿಪಾಠ ಇದೆ. ಇದು ಆನ್ಲೈನ್ ನಿಂದಲೇ ನಡೆಯುವುದಾಗಿದೆ, ಅಕ್ರಮದಲ್ಲಿ ಯಾರಾದರೂ ಇದ್ದರೆ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಟ್ರೇಡ್ ಲೈಸೆನ್ಸ್ ರದ್ದು ಮಾಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ ಹೀಗೆ ಮಾಡಿದಲ್ಲಿ ಸ್ಥಳೀಯ ಆಡಳಿತದ ಹಿಡಿತ ಇಲ್ಲದಂತಾಗಲಿದೆ ಹಾಗಾಗಿ ಟ್ರೇಡ್ ಲೈಸೆನ್ಸ್ ಅಗತ್ಯವಿದೆ. ಇದರಿಂದ 21 ಕೋಟಿ ಆದಾಯ ಬರುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಲೋಪಗಳ ಕುರಿತು ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತದೆ ಎಂದರು.
ಹೆಚ್ಐವಿ ಪೀಡಿತ ಮಕ್ಕಳ ಚಿಕಿತ್ಸೆಗೆ ಅನುದಾನ ಹೆಚ್ಚಳ:ಹೆಚ್ಐವಿ ಪೀಡಿತ ಮಕ್ಕಳ ಚಿಕಿತ್ಸೆ, ಪಾಲನೆ, ಪೋಷಣೆಗಾಗಿ ನೀಡಲಾಗುತ್ತಿದ್ದ ಅನುದಾನವನ್ನು ವಾರ್ಷಿಕ 15 ಕೋಟಿಯಿಂದ 20 ಕೋಟಿಗೆ ಹೆಚ್ಚಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿಯೇ ಪೀಡಿತರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ, ಖಾಸಗಿಗೆ ವಹಿಸುವ ಪ್ರಶ್ನೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಂ.ಕೆ ಪ್ರಾಣೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 18 ವರ್ಷದೊಳಗಿನ ಹೆಚ್ಐವಿ ಪೀಡಿತ ಮಕ್ಕಳ ಪೋಷಣೆ ಸರ್ಕಾರದಿಂದ ಆಗುತ್ತಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬಾದಿತ ಮಕ್ಕಳ ನೋಂದಾಯಿಸಿಕೊಂಡು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ, ನೋಂದಾಯಿತ ಪಟ್ಟಿ ಆಧಾರದಲ್ಲಿ ಪ್ರತಿ ಮಗುವಿಗೂ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ತಿಂಗಳು ಒಂದು ಸಾವಿರ ಹಣ ನೀಡುತ್ತಿದೆ, ಆರೋಗ್ಯ ಇಲಾಖೆ ಉಚಿತವಾಗಿ ಸಂಪೂರ್ಣ ಚಿಕತ್ಸೆ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದರು.
ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಅನುದಾನ ಕೊಡುವ ಪ್ರಶ್ನೆ ಬರಲ್ಲ ನಮ್ಮ ಸರ್ಕಾರಿ ಆಸ್ಪತ್ರೆಗಳೇ ಇರುವ ಕಾರಣ ಖಾಸಗಿಗೆ ಕೊಡುವ ಪ್ರಶ್ನೆ ಇಲ್ಲ, ಈ ಮಕ್ಕಳಿಗಾಗಿ 20 ಕೋಟಿ ಹಣವನ್ನು ವಿನಿಯೋಗ ಮಾಡಲಾಗುತ್ತಿದೆ ಒಟ್ಟು 301 ಸೋಂಕಿತ, 9,488 ಬಾದಿತ ಮಕ್ಕಳು ಸೇರಿ 12,590 ಮಕ್ಕಳಿಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ನೆರವು ಕಲ್ಪಿಸಲಾಗಿದೆ. ಬಾಲ ಮಂದಿರ ಮತ್ತು ಹೊರಗೆ ಎರಡೂ ಕಡೆ ಇರುವವರಿಗೆ ನೆರವು ನೀಡಲಾಗುತ್ತಿದೆ, ವಯಸ್ಕ ಪೀಡಿತರ ಆರ್ಥಿಕ ಸಬಲೀಕರಣಕ್ಕಾಗಿ 40 ಸಾವಿರ ಸಬ್ಸಿಡಿ ಕೊಡಲಾಗುತ್ತಿದೆ ಎಂದರು.
ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್ ವೇ ಕ್ವಾರಿ ಪರಿಶೀಲನೆ:ಕೋಲಾರ ಜಿಲ್ಲೆ ಮುಳುಬಾಗಿಲಿನ ಬಂಡೇಹಳ್ಳಿಯಲ್ಲಿ ಕ್ವಾರಿಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ, ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋಲಾರ ಜಿಲ್ಲೆ ಮುಳುಬಾಗಿಲಿನ ಬಂಡೇಹಳ್ಳಿಯಲ್ಲಿ ಕ್ವಾರಿ ಲೀಸ್ ಕೊಡಲಾಗಿದೆ, 11.20 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ, ಗ್ರಾಮ ಪಂಚಾಯತ್ ಜೊತೆ ಒಡಂಬಡಿಕೆ ಮಾಡಿಕೊಂಡು ತ್ಯಾಜ್ಯ ವಿಲೇವಾರಿ ಒಪ್ಪಂದ ಮಾಡಿಕೊಂಡು 6.30 ಲಕ್ಷ ಶುಲ್ಕ ಪಡೆದು ಗ್ರಾಮ ಪಂಚಾಯಿತಿ ಎನ್ಒಸಿ ಕೊಟ್ಟಿದ್ದಾರೆ.
ಅಲ್ಲದೇ ಭಾರತ್ ಮಾಲಾ ಯೋಜನೆಯಡಿ ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಬಳಕೆಗೆ ಕೇಳಿದ್ದಾರೆ. ಆದರೆ, ಊರು ಪಕ್ಕದಲ್ಲಿ ಗಣಿಗಾರಿಕೆಯಿಂದ ಸಮಸ್ಯೆ ಎಂದಿದ್ದೀರಿ, ಈ ಬಗ್ಗೆ ಸಭೆ ಮಾಡಲಿದ್ದೇವೆ, ಜನರಿಗೆ ಸಮಸ್ಯೆ ಆಗುತ್ತಿದ್ದರೆ, ಕಾನೂನು ಬಾಹಿರವಾಗಿದ್ದರೆ ಕ್ರಮ ಕೈಗೊಳ್ಳೋಣ, ಅಕ್ರಮ ನೋಡಿ ಕೂರುವುದಿಲ್ಲ, ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ:ಬೆಂಗಳೂರು ಹೊರತು ಬೇರೆ ಜಿಲ್ಲೆಗಳಲ್ಲಿ ಸಿಸಿಟಿವಿ ಅಳವಡಿಕೆ ಸಾಧ್ಯವಿಲ್ಲ ಎಂದ ಜ್ಞಾನೇಂದ್ರ: ಸರ್ಕಾರಕ್ಕೆ ಕುಟುಕಿದ ಸ್ಪೀಕರ್ ಕಾಗೇರಿ