ಕರ್ನಾಟಕ

karnataka

ETV Bharat / state

ಬಿಜೆಪಿ ಕುಟುಕುತ್ತಲೇ ಪಂಚ ಗ್ಯಾರಂಟಿ ಸಮರ್ಥಿಸಿಕೊಂಡ ಸಿಎಂ: ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸಭಾತ್ಯಾಗ

ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾಪದ ಮೇಲೆ ಚರ್ಚೆಗೆ ಸರ್ಕಾರದ ಪರ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು.

CM Siddaramaiah spoke.
ವಿಧಾನಪರಿಷತ್ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

By

Published : Jul 14, 2023, 3:42 PM IST

Updated : Jul 14, 2023, 5:28 PM IST

ವಿಧಾನ ಪರಿಷತ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಬೆಂಗಳೂರು: ಪಂಚ ಗ್ಯಾರಂಟಿಗಳನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾಪದ ಚರ್ಚೆಗೆ ನೀಡಿದ ಉತ್ತರದಲ್ಲಿ ಪ್ರತಿಪಕ್ಷ ಬಿಜೆಪಿಯನ್ನು ಕುಟುಕುವುದಕ್ಕೇ ಹೆಚ್ಚಿನ ಸಮಯ ತೆಗೆದುಕೊಂಡರು. ರಾಜಕೀಯ ಇತಿಹಾಸ ಪ್ರಸ್ತಾಪಿಸಿ ಬಿಜೆಪಿ ಅಧಿಕಾರ ನಡೆಸಿದ್ದನ್ನೇ ಟೀಕಿಸಿದ ಸಿಎಂ, ಬಿಜೆಪಿಯನ್ನು ಇಂಚಿಂಚು ಬಿಡದೇ ಟೀಕಿಸಿದರು. ಪ್ರತಿಪಕ್ಷ ನಾಯಕರಿಲ್ಲ ಎಂಬ ಸಿಎಂ ಮಾತಿಗೆ ತಿರುಗೇಟು ನೀಡಲು ಬಿಜೆಪಿ ಸರ್ಕಸ್ ನಡೆಸಬೇಕಾಯಿತು. ಅಂತಿಮವಾಗಿ ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾಪದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಿದ್ದರಾಮಯ್ಯ, ಜುಲೈ 3ರಂದು ರಾಜ್ಯಪಾಲರು ಈ ವರ್ಷ ಎರಡನೇ ಬಾರಿ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಮೊದಲ ಜಂಟಿ ಅಧಿವೇಶನ ನಡೆಯುತ್ತದೆ.

ರಾಜ್ಯಪಾಲರು ಸರ್ಕಾರದ ನೀತಿ ನಿಲುವುಗಳು ದೂರದೃಷ್ಠಿತ್ವ ಒಳಗೊಂಡು ಸದನದ ಮುಂದೆ ವಿಚಾರ ಮಂಡಿಸಲಿದ್ದಾರೆ. ಈ ಬಾರಿ ಚುನಾವಣೆ ನಡೆದು ಹೊಸ ಸರ್ಕಾರ ಬಂದಿದೆ. ಹೊಸ ಸರ್ಕಾರದ ಮುನ್ನೋಟ ಸದನದ ಮುಂದೆ ಮಂಡಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಹಾಗಾಗಿ ಎರಡನೇ ಬಾರಿ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ನಾವು ಐದು ವರ್ಷಗಳ ಕಾಲ ಸರ್ವತೋಮುಖ ಅಭಿವೃದ್ಧಿಗೆ ಏನು ಮಾಡಲಿದ್ದೇವೆ ಎನ್ನುವ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಎರಡೂ ಸದನದಲ್ಲಿ ವಂದನೆ ಸಲ್ಲಿಸುವ ನಿರ್ಣಯ ಮಾಡಬೇಕಿದೆ. ಮೇಲ್ಮನೆಯಲ್ಲಿ ಯುಬಿ ವೆಂಕಟೇಶ್ ವಂದನಾ ನಿರ್ಣಯ ಮಂಡಿಸಿ ಸಮರ್ಥವಾಗಿ ಸರ್ಕಾರದ ನಿಲುವು ಮಂಡಿಸಿದ್ದಾರೆ.

ಇದನ್ನು ಬೆಂಬಲಿಸಿ ನಾಗರಾಜ್ ಮಾತನಾಡಿದ್ದಾರೆ. ಸದನದ 25 ಸದಸ್ಯರು ಭಾಗವಹಿಸಿದ್ದರು .ಬಿಜೆಪಿ 9,ಕಾಂಗ್ರೆಸ್ 10, ಜೆಡಿಎಸ್ 6 ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಟೀಕೆ ಮಾಡಲಿ,ಬೇರೆ ರೀತಿಯ ಸಲಹೆ ಕೊಟ್ಟರೆ ಸ್ವೀಕಾರ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಗಳಿಕೆ, ತೆಗಳಿಕೆ ಸಮಚಿತ್ತದಿಂದ ಸ್ವೀಕಾರ ಮಾಡಬೇಕು. ಪ್ರತಿಪಕ್ಷಗಳು ಸಕಾರಾತ್ಮಕ ಸಲಹೆ ಕೊಟ್ಟರೆ ಅದನ್ನು ಒಪ್ಪಿಕೊಂಡು ಲೋಪವಿದ್ದಲ್ಲಿ ತಿದ್ದುಕೊಂಡು ಅನುಷ್ಠಾನಕ್ಕೆ ತರಲಿದ್ದೇವೆ. ಆದರೆ, ರಾಜಕೀಯಕ್ಕೆ ಟೀಕೆ ಮಾಡಿದರೆ ಅದನ್ನೂ ಸ್ವೀಕರಿಸಿ ತಿರುಗೇಟು ನೀಡಲಿದ್ದೇವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಲವಾದ ಪ್ರತಿಪಕ್ಷ ಇರಬೇಕು. ಆಗ ಸರ್ಕಾರ ಯಶಸ್ವಿಯಾಗಿ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ಯಾವುದೇ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಲಿದೆ. ನಾವು ಕಾನೂನು ಮಾಡಬೇಕಾದರೂ ಚೌಕಟ್ಟಿನಲ್ಲಿ ಮಾಡಬೇಕು. ಎಲ್ಲರೂ ಸಂವಿಧಾನದ ಕಾರಣದಿಂದ ಇಲ್ಲಿಗೆ ಬಂದಿದ್ದೇವೆ. ಸಂವಿಧಾನ ರಕ್ಷಣೆಯಾದರೆ ನಮ್ಮ ರಕ್ಷಣೆಯಾಗಲಿದೆ. ಹಾಗಾಗಿ ಸಂವಿಧಾನ ರಕ್ಷಣೆ ನಮ್ಮ ಜವಾಬ್ದಾರಿ, ಇದು ಎಲ್ಲರೂ ಚಾಚು ತಪ್ಪದೆ ಪಾಲಿಸಬೇಕು ಎಂದು ಸಲಹೆ ನೀಡಿದರು.

ನಮಗೆ ಜನಾಶೀರ್ವಾದ ಇದೆ;
ಈ ಬಾರಿ ನಮ್ಮ ಸರ್ಕಾರ ನಮ್ಮ ಪಕ್ಷ ಹೆಚ್ಚು ಜನಾಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದೆ. ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಮತಗಳಿಕೆ ಮಾಡಿಕೊಂಡಿದೆ. ಬಿಜೆಪಿಗಿಂತ ಶೇ.6.9 ರಷ್ಟು ಹೆಚ್ಚು ಮತ ಪಡೆದಿದೆ. ಕಳೆದ ಐದು ಚುನಾವಣೆಯಲ್ಲಿ ಬಿಜೆಪಿ ಶೇ 35-36 ರಲ್ಲೇ ಇದೆ. ಕಾಂಗ್ರೆಸ್ 2004 ರಿಂದ ಇಲ್ಲಿಯವರೆಗೂ ಪ್ರತಿ ಚುನಾವಣೆಯಲ್ಲಿ ಶೇಕಡಾವಾರು ಮತಗಳಿಕೆ ಹೆಚ್ಚಾಗುತ್ತಲೇ ಬಂದಿದೆ. ಸೋತಿದ್ದರೂ ಮತಗಳಿಕೆಯಲ್ಲಿ ಹೆಚ್ಚುತ್ತಲೇ ಬಂದಿದೆ. ಈ ಬಾರಿ 135+1 ಸ್ಥಾನ ಬಂದಿದೆ.

ಕಳೆದ ಐದರಲ್ಲಿ ಮೂರು ಬಾರಿ 2004,2008,2018 ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ,‌ 2013 ರಲ್ಲಿ ನಾವು ಸ್ಪಷ್ಟ ಬಹುಮತ ಪಡೆದಿದ್ದೆವು, 2023 ರಲ್ಲಿಯೂ ಸ್ಪಷ್ಟ ಬಹುಮತ ಪಡೆದೆವು. ಬಿಜೆಪಿಯವರು 2008 ಮತ್ತು 2019 ರಲ್ಲಿ ಅಧಿಕಾರ ನಡೆಸಿದ್ದಾರೆ. ಆದರೆ ಯಾವಾಗಲೂ ಜನ ಬಿಜೆಪಿಗೆ ಜನಾಶೀರ್ವಾದ ಮಾಡಿಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ, ಜನ ಬಹುಮತ ಕೊಟ್ಟಿಲ್ಲ, ಬಹುಮತ ಇಲ್ಲದೇ ಎರಡು ಬಾರಿ ಅಧಿಕಾರ ನಡೆಸಿದರು.‌ 2008 ರಲ್ಲಿ 110 ಸ್ಥಾನ ಬಂದಿತ್ತು ಎಂದು ವಿವರಣೆ ನೀಡಿದರು.

ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ಮೂರು ಬಾರಿ ಅಧಿಕಾರದ ಹತ್ತಿರ ತಂದಿದ್ದಾರೆ. ಲೋಕಸಭೆಯಲ್ಲಿ 25 ಸ್ಥಾನ ಯಾವತ್ತಾದರೂ ಪಡೆದಿದ್ದೀರಾ, ಶೇ 51 ಮತ ಪಡೆದಿದಿದ್ದೀರಾ ಎಂದರು ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಪೀಠದಿಂದ ಎದ್ದುನಿಂತ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ನಿಯಂತ್ರಿಸಿದರು.

ನಂತರ ಮಾತನಾಡಿದ ಸಿಎಂ ಪದೇ ಪದೆ ಮಧ್ಯ ಪ್ರವೇಶಿಸಿ ನನ್ನ ದಾರಿ ತಪ್ಪಿಸಬೇಕು ಎಂದುಕೊಂಡರೆ ಅದು ನಿಮ್ಮ ಭ್ರಮೆ.
ನನ್ನನ್ನು ಯಾರೂ ದಾರಿ ತಪ್ಪಿಸಲಾಗಲ್ಲ. ನನಗೆ ಐಡಿಯಾಲಜಿಕಲ್ ಸ್ಪಷ್ಟತೆ ಇದೆ. ನನಗೆ ಗೊಂದಲ ಆಗಲ್ಲ, ನೀವು ಏನೇ ಪ್ರಯತ್ನ ಮಾಡಿದರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ಏನೇ ಪ್ರಶ್ನೆ ಕೇಳಿದರೂ ಉತ್ತರ ಕೊಡುವ ಸಾಮರ್ಥ್ಯ ಈ ಸರ್ಕಾರಕ್ಕೆ ಇದೆ, ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ ಎಂದು ಬಿಜೆಪಿಯನ್ನು ಕುಟುಕಿದರು.

ಯಡಿಯೂರಪ್ಪ ಇದ್ದರೂ ಬಹುಮತ ಬರಲಿಲ್ಲ: 1980 ರಲ್ಲಿ 28 ರಲ್ಲಿ 27 ಗೆದ್ದಿದ್ದೇವೆ, ಒಂದು ಜನತಾ ಪಕ್ಷ ಗೆದ್ದಿತ್ತು. ಇತಿಹಾಸ ಇದೆ, ಕರ್ನಾಟಕ್ಕೆ ಸೀಮಿತವಾಗಿ ಮಾತನಾಡುತ್ತೇವೆ. ದೆಹಲಿಗೆ ಹೋಗಲ್ಲ, ಇವರಿಗೆ ದೆಹಲಿ ಬಿಟ್ಟರೆ ಬೇರೆ ಇಲ್ಲ. ಮೋದಿ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ಕೆಲಸ ಇಲ್ಲ. ಕರ್ನಾಟದಲ್ಲಿ ನೀವೇನು ಮಾಡಿದ್ದೀರಿ.

2013 ರಲ್ಲಿ ಬಿಜೆಪಿ ಮೂರು ಭಾಗವಾಗಿತ್ತು ಶೇ 19 ರ ಮತಗಳಿಕೆಗೆ ಬಂದಿತ್ತು. ಜೆಡಿಎಸ್ ಗಿಂತಲೂ ಕಡಿಮೆಯಾಗಿತ್ತು. ಇದು ಇತಿಹಾಸ, ಹಿಂದಿನ ಐದರಲ್ಲಿ ಯಾವ ಚುನಾವಣೆಯಲ್ಲೂ ನಿಮಗೆ 113 ಸ್ಥಾನ ಬಂದಿಲ್ಲ. ಒಮ್ಮೆ 110 ಸ್ಥಾನ ಮತ್ತೊಮ್ಮೆ 104 ಸ್ಥಾನ ಅಷ್ಟೆ ಬಂದಿದೆ. ಶೇ.50.1 ಸ್ಥಾನ ಬಂದರೆ ಮಾತ್ರ ಬಹುಮತ.ಶೇ 49.99 ಬಂದರೂ ಬಹುಮತ ಇಲ್ಲ ಎಂದೇ ಅರ್ಥ. 2004,2008,2018 ರಲ್ಲಿ ಯಡಿಯೂರಪ್ಪ ಇದ್ದರೂ ಬಹುಮತ ಬರಲಿಲ್ಲ.

2008,2018 ರಲ್ಲಿ ಬಿಎಸ್​​ವೈ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಿರಿ. ಆದರೂ ಬಹುಮತ ಬರಲಿಲ್ಲ. ಜನ ನಿಮ್ಮನ್ನು ಒಪ್ಪಿಲ್ಲ. ಐದರಲ್ಲಿ ಎರಡು ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 2018 ರಲ್ಲಿ ನಾವು ಸೋತಾಗಲೂ ಬಿಜೆಪಿಗಿಂತ ಹೆಚ್ಚಿನ ಮತಗಳಿಕೆ ಮಾಡಿಕೊಂಡಿದ್ದೆವು. ಆದರೆ, ಪ್ರಜಾಪ್ರಭುತ್ವದಲ್ಲಿ ಸಂಖ್ಯೆ ಮುಖ್ಯ, ನಿಮಗೆ 104 ಸ್ಥಾನ ಬಂದರೆ ನಮಗೆ 80 ಸ್ಥಾನ ಬಂತು ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವೈಶಿಷ್ಟ್ಯ ಎಂದು ಬಿಜೆಪಿಗೆ ತಿವಿದರು.

ಕೋಮುವಾದದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಬೆಲೆ ಎರಿಕೆ ವಿರುದ್ಧ ಮತ ಕೊಟ್ಟಿದ್ದಾರೆ. ನಾವು ಐದು ಗ್ಯಾರಂಟಿಗಳ ಪ್ರಸ್ತಾಪ ಮಾಡಿದೆವು. ಜನ ನಮ್ಮನ್ನು ನಂಬುತ್ತಾರೆ ನಿಮ್ಮನ್ನು ನಿಂಬಲ್ಲ, ನೀವು ಕೂಡ ಪ್ರಣಾಳಿಕೆ ಬಿಡುಗಡೆ ಮಾಡಿದ್ದಿರಿ, ಜೆಡಿಎಸ್ ಪಂಚ ರತ್ನ ಮಾಡಿತ್ತು, 123 ಸ್ಥಾನ ಬರದಿದ್ದಲ್ಲಿ ಪಕ್ಷ ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು ಆದರೆ ಏನಾಯಿತು. ಶೇ.19 ರಿಂದ ಶೇ.13.30 ಕ್ಕೆ ಬಂದಿದೆ. 2004 ರಲ್ಲಿ 59 ಸ್ಥಾನ ಜೆಡಿಎಸ್ ಗೆ ಇತ್ತು ಈಗ 19 ಸ್ಥಾನಕ್ಕೆ ಬಂದಿದೆ. ಅಂದು ನಾನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷನಾಗಿದ್ದೆ, 2005 ರಲ್ಲಿ ಪಕ್ಷದಿಂದ ತೆಗೆದುಹಾಕಿದರು, ನಾನು ಪಕ್ಷ ಬಿಡಲಿಲ್ಲ, ಪಕ್ಷವಿರೋಧಿ ಚಟುವಟಿಕೆ ಎಂದು ನನ್ನನ್ನು ಉಚ್ಚಾಟನೆ ಮಾಡಿದರು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ ಹಾಗಾಗಿ ಕಾಂಗ್ರೆಸ್ ಗೆ ನಾನು ಚಿರರುಣಿ ಎಂದು ಜೆಡಿಎಸ್ ಅನ್ನು ಟೀಕಿಸಿದರು.

ಸರ್ವಜನಾಂಗದ ಶಾಂತಿಯ ತೋಟ ಆಗಬೇಕು:ಐದರಲ್ಲಿ ಎರಡು ಬಾರಿ ನಮಗೆ ಸ್ಪಷ್ಟ ಬಹುಮತ ಕೊಟ್ಟಿದ್ದರು ಬಿಜೆಪಿ ಎರಡು ಬಾರಿ ಆಡಳಿತ ಮಾಡಿದರೂ ಅವರಿಗೆ ಸ್ಪಷ್ಟ ಬಹುಮತ ಕೊಟ್ಟಿರಲಿಲ್ಲ. ನಮಗೆ ಜನ ಕೊಟ್ಟ ಐದು ವರ್ಷದ ಅವಕಾಶದಲ್ಲಿ ರಾಜ್ಯವನ್ನು ಏನು ಮಾಡಲಿದ್ದೇವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದೇವೆ.

ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗಬೇಕು, ಏಳ ಕೋಟಿ ಜನರು ನೆಮ್ಮದಿ ಶಾಂತಿಯಿಂದ ಬದುಕಬೇಕು, ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು, ಕುವೆಂಪು ಹೇಳಿದಂತೆ ಆಗಬೇಕು, ಬಸವಣ್ಣ, ಬುದ್ದ,ಅಂಬೇಡ್ಕರ್, ಗಾಂಧಿ, ನಾರಾಯಣಗುರು ಕನಸಿನ ಕರ್ನಾಟಕ ಕಟ್ಟಬೇಕು ಎನ್ನುವುದು ಕಾಂಗ್ರೆಸ್​​​ನ ಉದ್ದೇಶ. ಇದನ್ನೇ ಜನರಿಗೆ ಹೇಳಿದ್ದೇವೆ. ಜನ ಆಶೀರ್ವಾದ ಮಾಡಿದ್ದಾರೆ.

ಈ ಬಾರಿ ನಾವು ವಾಗ್ವಾನ ಎಂದಿಲ್ಲ, ಗ್ಯಾರಂಟಿ ಪದ ಬಳಸಿದ್ದೇವೆ. ನಾನು ಮತ್ತು ಡಿ ಕೆ ಶಿವಕುಮಾರ ಸಹಿ ಮಾಡಿ ಮನೆ ಮನೆಗೆ ಹಂಚಿದ್ದೇವೆ. ನಮ್ಮ ಭರವಸೆಯನ್ನು ಜನ ಒಪ್ಪಿದ್ದಾರೆ. ಮೋದಿಯನ್ನು ಕರೆತಂದು ಭಾಷಣ ಮಾಡಿದರು. ಮೋದಿ ಆಶೀರ್ವಾದ ಬೇಕು ಎಂದರೆ ಬಿಜೆಪಿಗೆ ಮತ ಹಾಕಿ ಎಂದು ನಡ್ಡಾ ಹೇಳಿದ್ದರು. ಆದರೂ ಜನ ನಮ್ಮ ಮೇಲೆ ನಂಬಿ ವಿಶ್ವಾಸ ಇಟ್ಟು ಜನ ನಮಗೆ ಮತ ಹಾಕಿದ್ದಾರೆ ಎಂದು ಬಿಜೆಪಿ ನಾಯಕತ್ವ ಟೀಕಿಸಿದರು.


ಮೋದಿ ಎಲ್ಲೆಲ್ಲಿ ಹೋಗಿದ್ದಾರೋ ಅಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ. ಯಾವ ಪ್ರಧಾನಿಯೂ ಒಂದು ರಾಜ್ಯದ ಚುನಾವಣೆಗೆ ಇಷ್ಟು ಬಾರಿ ಬಂದ ಉದಾಹಾರಣೆ ಇಲ್ಲ. ಸಂಪೂರ್ಣ ಮೋದಿ ಮೇಲೆ ಅವಲಂಭಿಸಿದ್ದೀರಿ. ನಂಜನಗೂಡಿಗೆ ಮೋದಿ ಬಂದರು ಅದರ ಸುತ್ತಮುತ್ತಲಿನ ಎಲ್ಲ ಕ್ಷೇತ್ರ ನಾವು ಗೆದ್ದೆವು, ಅದರ ಅರ್ಥ ಮೋದಿ ಮೇಲೆ ಅವಲಂಬನೆಯಾಗಬೇಡಿ ಎಂದಾಗಿದೆ. ಹಿಂದೆ ಇಂದಿರಾಗಾಂಧಿ ಹೆಸರೇಳಿದರೂ ಗೆಲ್ಲುತ್ತಿದ್ದ ಕಾಲ ಇತ್ತು ಈಗ ಮೋದಿಗೂ ಜನಪ್ರಿಯತೆ ಇದೆ, ಜನಪ್ರಿಯತೆ ಇಲ್ಲ ಎನ್ನಲ್ಲ ಆದರೆ ಅದರ ಗ್ರಾಫ್ ಡೌನ್ ಆಗುತ್ತಿದೆ ಎಂದರು.

ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ:ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರಿಯಾಂಕ್ ಖರ್ಗೆ, ಬಲಿಷ್ಠ ವಿರೋಧ ಪಕ್ಷ ಬೇಕು, ಸದನದಲ್ಲಿ ಪ್ರತಿಪಕ್ಷ ನಾಯಕರು ಎಲ್ಲಿ? ಎಂದರು ಈ ವೇಳೆ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನಂತರ ಉತ್ತರ ಮುಂದುವರೆಸಿದ ಸಿದ್ದರಾಮಯ್ಯ, ಮೋದಿ ಟಾಲ್ ಲೀಡರ್ ಇಲ್ಲ ಎಂದಿಲ್ಲ. ಆದರೆ ಚಕ್ರ ತಿರುಗಬೇಕಲ್ಲ, ಎರಡು ಸ್ಥಾನದಿಂದ ಮುನ್ನೂರಕ್ಕೆ ಬಂದಿದ್ದೀರಿ. ಮುಂದೆ ಕೆಳಗೆ ಹೋಗಲೇಬೇಕಲ್ಲ. ಕರ್ನಾಟಕದಿಂದ ನಿಮ್ಮ ಅವನತಿ ಶುರುವಾಯಿತು.ಮೋದಿ ಜನಪ್ರಿಯತೆ ಕುಸಿಯುತ್ತಿದೆ ಎಂದರು.

ನಾವು ಗ್ಯಾರಂಟಿಯಿಂದ ಗೆದ್ದಿಲ್ಲ, ನಿಮ್ಮ ನಾಲ್ಕು ವರ್ಷದ ಭ್ರಷ್ಟಾಚಾರ, ದುರಾಡಳಿತದಿಂದ ನೀವು ಸೋತಿದ್ದು, ಜನ ನಮ್ಮ ಕೈ ಹಿಡಿದಿದ್ದಾರೆ. ನೀವೂ ಕೂಡ ಪ್ರಣಾಳಿಕೆ ಕೊಟ್ಟಿದ್ದಿರಲ್ಲ ಯಾಕೆ ಜನ ನಿಮ್ಮ ಕೈ ಹಿಡಿಯಲಿಲ್ಲ. ಜನ ನಾವು ಹೇಳಿದ್ದನ್ನು ಸ್ವೀಕರಿಸಿದರು, ಅವರು ಹೇಳಿದ್ದನ್ನು ತಿರಸ್ಕರಿಸಿದರು. ನಾವು ಜನರ ಜೇಬಿಗೆ ದುಡ್ಡು ಹಾಕುವುದಾಗಿ ಹೇಳಿದರೆ, ಬಿಜೆಪಿಯವರು ಜನರ ಜೇಬಿನಿಂದ ಹಣ ತೆಗೆದುಕೊಂಡಿದ್ದಾರೆ‌ ಎಂದು ಟೀಕಿಸಿದರು.

ಸಾವಿರ ವರ್ಷದ ಪರಂಪರೆಯನ್ನು ರಾಜ್ಯಪಾಲರ ಭಾಷಣದಲ್ಲಿ ಪರಿಚಯಿಸಿದ್ದಾರೆ.ಮನುಷ್ಯ ಮನುಷ್ಯನ ನಡುವೆ ಗೋಡೆ ಕಟ್ಟುವುದು ಕೋಮುವಾದ, ಧರ್ಮ ಧರ್ಮ ಬೇರೆ ಇರಬಹುದು ಆದರೆ ಎಲ್ಲ ಧರ್ಮದ ಸಾರ ಒಂದೆ, ನಮ್ಮಲ್ಲಿ ವೈರುಧ್ಯತೆಯಲ್ಲಿ ಏಕತೆ ಕಾಣಬೇಕು. ಅದರಲ್ಲಿ ನಾವು ನಂಬಿಕೆ ಇರಿಸಿಕೊಂಡಿದ್ದೇವೆ, ನಾವು ಎಲ್ಲ ಜಾತಿ,ಧರ್ಮ, ಸಂಸ್ಕೃತಿ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಮನಷ್ಯ ಜಾತಿ ತಾನೊಂದೆ ವಲಂ ಎಂದು ಆದಿಕವಿ ಪಂಪ ಹೇಳಿದ್ದರು,ಇವರೆಲ್ಲರ ಸಾರಾಂಶವೇ ನಮ್ಮ ಸಂವಿಧಾನದಲ್ಲಿದೆ, ನಾವು ಸಂವಿಧಾನಕ್ಕೆ ತಲೆಬಾಗುತ್ತೇವೆಯೋ ಹೊರತು ಬೇರೆ ಯಾವುದಕ್ಕೂ ತಲೆ ಬಾಗಲ್ಲ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟಾ ಶ್ರೀನಿವಾಸ ಪೂಜಾರಿ, ನಮಗೆ ಮಾರ್ಗಸೂಚಿ ಹಾಕಿಕೊಡುವುದು ಬೇಡ, ಟೋಪಿ ಕೊಟ್ಟರೆ ಹಾಕಿಕೊಂಡು ಕೇಸರಿ ಶಾಲು ಕೊಟ್ಟರೆ ತಿರಸ್ಕರಿಸಿದರೆ ಕೆಲವರಿಗೆ ನೋವಾಗಲಿದೆ. ಹಾಗಾಗಿ ಎಲ್ಲರನ್ನು ಸಮಾನವಾಗಿ ನೋಡಬೇಕು ಎಂದರು. ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ ನಿಮ್ಮ ಪ್ರಧಾನಿ ಮಾಡಿದ್ದನ್ನು ನೀವೆಲ್ಲಾ ಅನುಭವಿಸಿದ್ದೀರಿ ಮರೆಯಬೇಡಿ. ನೀವು ನಮಗೆ ಹೇಳಿವುದು ಬೇಡ ಎಂದರು.

ನೀವು ಹಿಟ್ಲರ್ ವಂಶಸ್ಥರಾ? :ಬಳಿಕ ಮಾತನಾಡಿದ ಸಿದ್ದರಾಮಯ್ಯ, ಹಿಟ್ಲರ್ ಬಗ್ಗೆ ಮಾತನಾಡಿದರೆ ಯಾಕೆ ಸಿಟ್ಟು ಬರಲಿದೆ.ನೀವು ಹಿಟ್ಲರ್ ವಂಶಸ್ಥರಾ? ನಾವೆಲ್ಲಾ ವೈರಿಗಳಲ್ಲ. ನಾವೆಲ್ಲಾ ಜನಸೇವೆ ಮಾಡಲು ಬಂದಿದ್ದೇವೆ, ಹಿಟ್ಲರ್ ಏನಾಗಿದ್ದ ಎಂದಿದ್ದೇನೆಯೇ ಹೊರತು ಪ್ರತಿಪಕ್ಷಗಳನ್ನು ಉಲ್ಲೇಖಿಸಿಲ್ಲ. ನಾವು ಪಂಚ ಗ್ಯಾರಂಟಿ ನೀಡಿದ್ದೇವೆ ಅದರಂತೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಸಿಗಲಿದೆ. ಹಾಲು ಮೊಸರು, ಪೆನ್ನು ಪೆನ್ಸಿಲ್ ಮೇಲೆ ಜಿಎಸ್ಟಿ ಹಾಕಿದ್ದನ್ನು ಜೇಬಿನಿಂದ ಕಿತ್ತುಕೊಳ್ಳುವುದು ಎಂದೆ, ಅನ್ನಭಾಗ್ಯ,ಶಕ್ತಿ, ಗೃಹ ಜ್ಯೋತಿ, ಯುವನಿಧಿ‌ 52 ಸಾವಿರ ಕೋಟಿಗೂ ಅಧಿಕ ವೆಚ್ಷ, ಪ್ರತಿ ತಿಂಗಳು 4-5 ತಿಂಗಳು ಹಣ ಸಿಗಲಿದೆ. ಇದು ಜನರ ಕೈಗೆ ದುಡ್ಡು ಕೊಡುವುದಲ್ಲವೇ? ಹಣ ಇದ್ದರೆ ವ್ಯಾಪಾರ ವಹಿವಾಟು ಹಾಕಿದೆ, ತೆರಿಗೆ ಬರಲಿದೆ, ಒಂದಕ್ಕೊಂದು ಲಿಂಕ್ ಇರಲಿದೆ ಎಂದರು.

ಈ ಐದು ಗ್ಯಾರಂಟಿ ಜಾರಿ ಮಾಡಿದರೆ ಎಲ್ಲ ರಾಜ್ಯಗಳೂ ದಿವಾಳಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ನಾವು ಗ್ಯಾರಂಟಿ ಜಾರಿ ಮಾಡಿ ರಾಜ್ಯ ದಿವಾಳಿಯಾಗಲು ಬಿಡಲು ಇದನ್ನು ಬಜೆಟ್ ನಲ್ಲಿ ತೋರಿಸಿದ್ದೇವೆ. ಮೊದಲ ಬಜೆಟ್ ನಲ್ಲೇ ತಾತ್ವಿಕ ಅನುಮೋದನೆ ನೀಡಿದ್ದೇವೆ. ಬಜೆಟ್ ನಲ್ಲಿ ಎಲ್ಲವನ್ನೂ ಹೇಳಿದ್ದೇವೆ. ಇದು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದವರು ಅನುಷ್ಠಾನಕ್ಕೆ ಮುಂದಾಗುತ್ತಿದ್ದಂತೆ ಈಗ ಷರತ್ತು ಹಾಕಿದ್ದೇವೆ ಎನ್ನುತ್ತಿದ್ದೀರಿ. 200 ಯೂನಿಟ್ ವರೆಗೂ ಉಚಿತ ಎಂದಿದ್ದೇವೆ. ಆದರೆ 40 ಯೂನಿಟ್ ಬಳಸುವವರಿಗೂ 200 ಯೂನಿಟ್ ಕೊಡಿ ಎನ್ನುವುದು ಅವೈಜ್ಞಾನಿಕ ತರ್ಕ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ನೀವು ಎಲ್ಲರಿಗೂ ಕೊಡುತ್ತೇವೆ ಎಂದಿದ್ದೀರಿ ಕೊಡಬೇಕಲ್ಲ ಎಂದರು. ಈ ವೇಳೆ ಬಿಜೆಪಿ ಕಾಂಗ್ರೆಸ್ ಸದಸ್ಯರಿಂದ ಜಟಾಪಟಿ ನಡೆಯಿತು. ಉಪ ಸಭಾಪತಿ ಪ್ರಾಣೇಶ್ ಪೀಠದಿಂದ ಎದ್ದು ನಿಂತು ಸದನ ನಿಯಂತ್ರಣ ಮಾಡಿದರು.

ನಂತರ ಮಾತನಾಡಿದ ಸಿದ್ದರಾಮಯ್ಯ, ಎಲ್ಲರೂ ನಮ್ಮವರೇ ಆದರೆ ಕೇಶವಕೃಪಾ ನೋಡುತ್ತದೆ ಎಂದು ಮಾತನಾಡುತ್ತಿದ್ದಾರೆ.
ಇವರದ್ದು ಶಿಸ್ತಿನ ಪಕ್ಷ ಆದರೆ 15 ದಿನವಾಯಿತು, ಪ್ರತಿಪಕ್ಷ ನಾಯಕರನ್ನು ಮಾಡಿಕೊಳ್ಳಲು ಆಗಲಿಲ್ಲ. ಇಷ್ಟೊಂದು ರಾಜಕೀಯವಾಗಿ ದಿವಾಳಿ ಆಗಲಿದೆ ಎಂದು ಅಂದುಕೊಂಡಿರಲಿಲ್ಲ ಎಂದು ಟೀಕಿಸಿದರು. ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿಗಳು ಐದಾರು ಜನ ಇದ್ದಾರೆ. ಸಭಾಪತಿ ಕೊಠಡಿಯಲ್ಲಿ ಚೀಟಿ ಹಾಕಿ ಎತ್ತಿ ಹೈಕಮಾಂಡ್ ತೀರ್ಮಾನ ಮಾಡುವವರೆಗೂ ಆ ಕುರ್ಚಿಯಲ್ಲಿ ಕೂರಿಸಿ. ಸ್ಥಾನ ಖಾಲಿ ಬಿಡಬಾರದು ಎಂದರು. ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ನಮ್ಮನ್ನು ಬೆಳೆಸಿದವರು ಈ ರೀತಿ ಹೇಳಬಾರದು ಎಂದು ತಿರುಗೇಟು ನೀಡಿದರು.

ಪ್ರತಿಪಕ್ಷ ನಾಯಕ ಸ್ಥಾನ ಸಾಂವಿಧಾನಿಕ ಹುದ್ದೆ ಖಾಲಿ :ನಂತರ ಮಾತನಾಡಿದ ಸಿದ್ದರಾಮಯ್ಯ ಸಾಂವಿಧಾನಿಕ ಹುದ್ದೆ ಖಾಲಿ ಬಿಡಬಾರದು, ಅಸೆಂಬ್ಲಿಯಲ್ಲಿ ಕುಮಾರಸ್ವಾಮಿ ಅವರನ್ನು ಪ್ರತಿಪಕ್ಷ ನಾಯಕನನ್ನು ಮಾಡಲು ಬಿಜೆಪಿ ಹೊರಟಿದೆ. ಇಲ್ಲಿಯೂ ಜೆಡಿಎಸ್ ನ ಮಾಡುತ್ತಿದೆಯಾ? ಕರ್ನಾಟಕದ ಇತಿಹಾಸದಲ್ಲಿ ಉಭಯ ಸದನಗಳ ಪ್ರತಿ ಪಕ್ಷ ನಾಯಕನ ಸ್ಥಾನ ಖಾಲಿ ಇರಲಿಲ್ಲ. ರಾಜಕೀಯವಾಗಿ ಅಷ್ಟೊಂದು ದಿವಾಳಿಯಾಗಿದೆ. ಸಾಂವಿಧಾನಿಕ ಹುದ್ದೆ ಬಹಳ ಮಹತ್ವದ್ದಾಗಿದೆ. ಖಾಲಿ ಹಿಂದೆ ರಾಜಕೀಯ ದಿವಾಳಿತನ ಎದ್ದು ಕಾಣಲಿದೆ ಎಂದು ಟೀಕಿಸಿದರು.

ತೇಜಸ್ವಿನಿಗೌಡ,ಮರಿತಿಬ್ಬೇಗೌಡ ಜಟಾಪಟಿ: ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ದಾಸರ ಪದದಲ್ಲಿ ಮಹಿಳೆಯರ ಬಗ್ಗೆ ಬಳಕೆಯಾಗಿದ್ದ ಪದವನ್ನು ಉಲ್ಲೇಖ ಮಾಡಿದ್ದಕ್ಕೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಆಕ್ಷೇಪ ವ್ಯಕ್ತಪಡಿಸಿದರು. ಲಾಜ್ ನಲ್ಲಿ ಮಾತನಾಡಿ, ಕುಡಿದಾಗ ಮಾತನಾಡಿ ಇಲ್ಲಿ ಬೇಡ, ಕಡತದಿಂದ ತೆಗೆಯಿರಿ ಇಲ್ಲದೇ ಇದ್ದಲ್ಲಿ ನಾವು ಮಹಿಳೆಯರು ಹೊರಹೋಗುತ್ತೇವೆ ಎಂದರು‌. ಇದಕ್ಕೆ ಸಮ್ಮತಿಸಿದ ಸಭಾಪತಿ ಹೊರಟ್ಟಿ ಅಸಾಂವಿಧಾನಿಕ ಪದ ಅಲ್ಲದೇ ಇದ್ದರೂ ಇಲ್ಲಿ ಆ ಪದ ಬಳಕೆ ಶೋಭೆಯಲ್ಲ ಎಂದು ಕಡತದಿಂದ ತೆಗೆಯಲಾಗಿದೆ ಎಂದರು. ಆದರೂ ಮರಿತಿಬ್ಬೇಗೌಡ ತೇಜಸ್ವಿನಿಗೌಡ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂಓದಿ:ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದ ಜನ ಪರಿತಪಿಸಬೇಕಾಗಲಿದೆ: ಆರ್.ಅಶೋಕ್

Last Updated : Jul 14, 2023, 5:28 PM IST

ABOUT THE AUTHOR

...view details