ಬೆಂಗಳೂರು:ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿ ರಾಜ್ಯಪಾಲ ವಜುಭಾಯ್ ವಾಲಾ ಅವರ ಭಾಷಣದ ಪ್ರತಿಯನ್ನು ವಿಧಾನ ಪರಿಷತ್ನಲ್ಲಿ ಮಂಡಿಸಲಾಯಿತು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪವನ್ನು ಆರಂಭಿಸಿದರು.
ಜಂಟಿ ಅಧಿವೇಶನದ ಮೊದಲ ದಿನದ ವಿಧಾನ ಪರಿಷತ್ ಕಲಾಪ ಮಧ್ಯಾಹ್ನ 12.45 ಕ್ಕೆ ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡಿತು. ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಸದನದ ಮುಂದೆ ಮಂಡಿಸಿದರು.
ನಂತರ ಸಂತಾಪ ಸೂಚನೆ ಕಲಾಪವನ್ನು ಕೈಗೆತ್ತಿಕೊಳ್ಳಲಾಯಿತು. ಉಪಸಭಾಪತಿ ಧರ್ಮೇಗೌಡ, ಮಾಜಿ ಸಚಿವರಾದ ಜೈವಂತ ಪ್ರೇಮಾನಂದ ಸುಬ್ರಾಯ, ರೇಣುಕಾ ರಾಜೇಂದ್ರನ್, ಮಲ್ಲಪ್ಪ ಚನ್ನಬಸಪ್ಪ ಮನಗೂಳಿ, ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯ, ಪ್ರೊ. ರೊದ್ದಂ ನರಸಿಂಹ, ಉದ್ಯಮಿ ಆರ್.ಎನ್ ಶೆಟ್ಟಿ, ಕೃಷಿ ಸಾಧಕಿ ಮಹಾದೇಚಿ ಅಣ್ಣಾರಾವ್ ವಣದೆ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್, ಹಿಂದೂಸ್ಥಾನಿ ಸಂಗೀತಗಾರ ಗುಲಾಮ್ ಮುಸ್ತಫಾ ಖಾನ್ ನಿಧನಕ್ಕೆ ಸಭಾಪತಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.
ಸಭಾಪತಿಗಳು ಮಂಡಿಸಿದ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ ಆಡಳಿತ ಪಕ್ಷ ಬಿಜೆಪಿ ಪರವಾಗಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಧರ್ಮೇಗೌಡರು ಸರ್ವ ಶ್ರೇಷ್ಠ ಸಹಕಾರಿ ಧುರೀಣರಾಗಿದ್ದರು. ಮಂಡಲ ಪಂಚಾಯಿತಿಯಿಂದ ಉಪಸಭಾಪತಿ ಸ್ಥಾನದವರೆಗೆ ಬಂದಿದ್ದರು. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಧರ್ಮೇಗೌಡರು ಧರ್ಮರಾಯನಂತೆ ಸಮಾಜದಲ್ಲಿ ಬದುಕಿದ್ದರು ಎಂದು ಸ್ಮರಿಸಿದರು. ಅಗಲಿದ ಎಲ್ಲ ಗಣ್ಯರ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು. ಧರ್ಮೇಗೌಡರ ಅಗಲಿಕೆಯಿಂದ ಅನಾಥ ಪ್ರಜ್ಞೆ ಕಾಡುತ್ತಿದೆ. ಪ್ರತಿ ಅಧಿವೇಶನದಲ್ಲೂ ನನ್ನ ಪಕ್ಕದಲ್ಲೇ ಇದ್ದು ನನ್ನ ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಈಗ ಅವರಿಲ್ಲ ಎನ್ನುವ ನೋವು ಕಾಡುತ್ತಿದೆ. ಇಷ್ಟು ಬೇಗ ಅಗಲುತ್ತಾರೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದರು.
ಧರ್ಮೇಗೌಡರ ಅಗಲಿಕೆಯಿಂದ ಸದನಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಸಹಕಾರಿ ಧುರೀಣರಾಗಿದ್ದರು. ನಾವು ಸಹಕಾರ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ಧರ್ಮೇಗೌಡರ ಸಾಧನೆಯನ್ನು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಜೆಡಿಎಸ್ ಶಾಸಕ ಮನಗೂಳಿ ನಿಧನಕ್ಕೆ ಎಸ್.ಆರ್. ಪಾಟೀಲ್ ಸಂತಾಪ ಸೂಚಿಸಿದರು. ಕೃಷಿ, ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ನಂತರ ಅಗಲಿದ ಎಲ್ಲ ಗಣ್ಯರ ಸಂತಾಪ ಸೂಚನೆಗೆ ಸಹಮತ ವ್ಯಕ್ತಪಡಿಸಿದರು.