ಬೆಂಗಳೂರು:ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದು ಇಡೀ ವಿಶ್ವವನ್ನೇ ದಂಗು ಬಡಿಸಿದೆ. ಇತ್ತ ಕರ್ನಾಟಕದಲ್ಲಿ ಅಪ್ರಾಪ್ತ ಬಾಲಕನೊಬ್ಬ ರೈಲ್ವೇ ಹಳಿಗಳ ಮೇಲೆ ಕಲ್ಲಿನ ತುಂಡುಗಳನ್ನು ಇಟ್ಟಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಆದರೆ ಈ ವಿಡಿಯೋ ಐದು ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಆದರೆ ಸ್ಥಳ ಯಾವುದು ಅನ್ನುವುದು ಗೊತ್ತಿಲ್ಲ.
ರೈಲು ಹಳಿಗಳ ಮೇಲೆ ಸುಮಾರು ದೂರ ಕಲ್ಲುಗಳನ್ನು ಇಡಲಾಗಿದೆ. ಹೀಗೆ ಕಲ್ಲು ಇಟ್ಟಿದ್ದು ಬಾಲಕ ಎಂಬುದು ಆಘಾತಕಾರಿ ಸಂಗತಿ. ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದ ವೇಳೆ ಜನರು ಬಾಲಕನನ್ನು ಹಿಡಿದು ವಿಚಾರಿಸುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೇ, ಆ ಬಾಲಕನಿಂದಲೇ ರೈಲು ಹಳಿಯ ಮೇಲಿನ ಕಲ್ಲಿನ ತುಂಡಗಳನ್ನು ತೆಗೆಸಿ, ನಡೆಯಬಹುದಾಗಿದ್ದ ಮತ್ತೊಂದು ಅಪಘಾತವನ್ನು ತಪ್ಪಿಸಿದ್ದಾರೆ.
ಕ್ಷಮೆ ಕೋರಿದ ಬಾಲಕ:ಜನರು ಬಾಲಕನನ್ನು ಹಿಡಿದು ಗದರಿಸಿ ಕೇಳಿದಾಗ, ತಾನು ಇದೇ ಮೊದಲ ಬಾರಿಗೆ ಈ ರೀತಿ ಮಾಡಿದ್ದೇನೆ. ತಪ್ಪಾಯ್ತು ಕ್ಷಮಿಸಿ ಎಂದು ಗೋಗರೆದಿದ್ದಾನೆ. ತನಗೆ ಯಾರೂ ಈ ರೀತಿ ಮಾಡುವಂತೆ ಹೇಳಿಲ್ಲ. ನಾನೇ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇನ್ನೊಬ್ಬಾತ ಪೊಲೀಸರಿಗೆ ಕರೆ ಮಾಡಿ ಹಿಡಿದುಕೊಡಿ ಎಂದು ಗದರಿದಾಗ, ಬಾಲಕ ಪೊಲೀಸರಿಗೆ ಒಪ್ಪಿಸಬೇಡಿ, ತಪ್ಪಾಯ್ತು ಎಂದು ಅಳುತ್ತಾ ಕೇಳಿಕೊಳ್ಳುತ್ತಿರುವುದು ದೃಶ್ಯಗಳಲ್ಲಿದೆ.
ಬಾಲಕನ ಈ ಅಪಾಯಕಾರಿ ಕೆಲಸದ ವಿಡಿಯೋವನ್ನು ಉದ್ಯಮಿಯಾದ ಅರುಣ್ ಪುದ್ದೂರ್ ಎಂಬುವವರು ಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೇ ಇದು ತುಂಬಾ ಗಂಭೀರವಾದ ವಿಚಾರ, ಶೀಘ್ರವೇ ಪರಿಶೀಲಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.