ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಉಪ ಕುಲಪತಿಯಾಗಿ ಶರಣಪ್ಪ ವೈಜನಾಥ್ ಹಲಸೆ ಇಂದು ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರಣಪ್ಪ ವೈಜನಾಥ್ ಹಲಸೆ ಅವರನ್ನು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಉಪ ಕುಲಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮುಂದಿನ ಮೂರು ವರ್ಷದ ಅವಧಿಗೆ ಅವರು ಕುಲಪತಿಗಳಾಗಿ ಮುಂದುವರಿಯಲಿದ್ದಾರೆ.
ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯಪಾಲರು ಒಪ್ಪಿ ನೂತನ ಆದೇಶ ಹೊರಡಿಸಿದ್ದಾರೆ. ನೂತನ ಉಪಕುಲಪತಿಗಳು ಮುಂದಿನ ಮೂರು ವರ್ಷ ಇಲ್ಲವೇ ಅವರಿಗೆ 65 ವರ್ಷ ಪೂರ್ಣಗೊಳ್ಳುವ ವರೆಗೆ ಯಾವುದು ಮೊದಲು ಬರುತ್ತದೆಯೋ ಅದಕ್ಕೆ ಅನ್ವಯಿಸುವಷ್ಟು ದಿನ ಉಪ ಕುಲಪತಿಗಳಾಗಿ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೇಮಕ ಮಾಡಿ ರಾಜ್ಯ ಸರ್ಕಾರದ ಆದೇಶ 2019 ರಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪ ಕುಲಪತಿಹಾಗಿ ನೇಮಕಗೊಂಡಿದ್ದ ಡಾ. ಎಸ್. ವಿದ್ಯಾಶಂಕರ್ ಅವಧಿಯು 2022ರ ಮೇ 30ಕ್ಕೆ ಮುಕ್ತಾಯವಾಗಿತ್ತು. ಇದಾದ ಬಳಿಕ ಇವರ ಕಾಲಾವಧಿಯನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಆದರೆ ಸೆ.29ಕ್ಕೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡ ಹಿನ್ನೆಲೆ ಇವರು ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ಮುಂದಿನ ಆದೇಶದವರೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಡಾ. ಎ. ಖಾದರ್ ಪಾಷಾ ಉಪಕುಲಪತಿಗಳಾಗಿ ನೇಮಕಗೊಂಡಿದ್ದರು.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳ ಹುಡುಕಾಟ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಮೂಲಕ ಸೂಚಿಸಿದ ಹೆಸರಿನಲ್ಲಿ ಶರಣಪ್ಪ ವೈಜನಾಥ್ ಹಲಸೆ ಆಯ್ಕೆಯಾಗಿದ್ದಾರೆ. ಮುಕ್ತ ವಿಶ್ವವಿದ್ಯಾಲಯ ಕುಲಪತಿಯಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ :ರಾಜ್ಯ ಮುಕ್ತ ವಿವಿಯಲ್ಲಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ದ್ವಿಪದವಿ ಪಡೆಯಲು ಅವಕಾಶ!