ಬೆಂಗಳೂರು: ನಟ ಚೇತನ್ ಅಮೆರಿಕ ಪ್ರಜೆಯಾಗಿದ್ದು, ಭಾರತದಲ್ಲಿ ಕೋಮುದ್ವೇಷ ಉಂಟು ಮಾಡುತ್ತಿದ್ದಾರೆ. ಇವರನ್ನು ದೇಶದಿಂದ ಹೊರಗೆ ಕಳುಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ಮುಖಂಡ ಗಿರೀಶ್ ಭಾರದ್ವಾಜ್ ಶಾಂತಿನಗರದ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ ಪತ್ರ ಬರೆದಿದ್ದಾರೆ.
ನಟ ಭಾರತದ ಪೌರತ್ವ ಪಡೆದಿಲ್ಲ. ಜನರಲ್ಲಿ ಸೌಹಾರ್ದ ಹಾಗೂ ಕೋಮು ಸಂಘರ್ಷ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಜಾತಿ, ಮತ, ಧರ್ಮದ ಹೆಸರಿನಲ್ಲಿ ಜನರನ್ನು ಪ್ರತ್ಯೇಕಿಸುವ ಹೇಳಿಕೆ ನೀಡುತ್ತಿದ್ದಾರೆ. ಬಹಿರಂಗ ಸಮಾವೇಶ, ಕಾರ್ಯಕ್ರಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಇತ್ತೀಚಿಗೆ ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಕೂಡ ದೇಶದ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದರು. ನಿರಂತರವಾಗಿ ಒಂದೇ ಕೋಮಿನ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಇವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಯಾವುದೇ ಬೆಲೆ ಇಲ್ಲದ ನಟ ಚೇತನ್, ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. 2017 ರಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದರು. ಮಠ, ದೇವಸ್ಥಾನಕ್ಕೆ 300 ಕೋಟಿ ರೂ ಕೊಡುವ ಮೂಲಕ ಕೋಮು ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದರು. ಸುತ್ತೂರು ಮಠದ ಮೇಲೆಯೂ ಆರೋಪ ಮಾಡಿದ್ದರು. ಈ ಮಠವು ಮಕ್ಕಳಿಗೆ ವಿದ್ಯಾಭ್ಯಾಸ, ಊಟ, ವಸತಿ ಸೇರಿ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿದೆ. ಆದರೂ, ನಟ ಅಪಪ್ರಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂತಹ ಕೋಮು ಮನಸ್ಥಿತಿ ಹೊಂದಿರುವ ನಟ ಚೇತನ್ ಮತ್ತೆ ಭಾರತದಲ್ಲಿ ನೆಲೆಯೂರಲು ಅರ್ಜಿ ಸಲ್ಲಿಸಿದರೆ ವಿದೇಶಿಗರ ಪ್ರಾದೇಶಿಕ ನೋಂದಣಿ ಅಧಿಕಾರಿಗಳು ಅನುಮತಿ ನೀಡಬಾರದು. ತಕ್ಷಣವೇ ಭಾರತದಿಂದ ಹೊರಗೆ ಕಳುಹಿಸಬೇಕು ಹಾಗೂ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ಪ್ರತಿಯನ್ನು ದಕ್ಷಿಣ ವಿಭಾಗದ ಡಿ.ಸಿ.ಪಿ ಕಚೇರಿಗೂ ಭಾರದ್ವಾಜ್ ಪತ್ರವನ್ನು ರವಾನಿಸಿದ್ದಾರೆ.
ಓದಿ:ರಾಜ್ಯದ ಮೊದಲ ಸೋಲಿಗರ ಕೋವಿಡ್ ಕೇರ್ ಸೆಂಟರ್ ಆರಂಭ.. ಕಾಡಿನ ಮಕ್ಕಳ ಭಯ ಅಂತ್ಯ