ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ 500 ವರ್ಷಗಳ ಸುದೀರ್ಘ ಸಂಘರ್ಷದ ಫಲಶ್ರುತಿ. ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿರುವುದು ಸಂಭ್ರಮದ ವಿಚಾರ. ಈ ಸಂದರ್ಭದಲ್ಲಿ ರಾಷ್ಟ್ರದ ಪ್ರತಿ ಮನೆಗೂ ಅಯೋಧ್ಯೆಯಿಂದ ತಂದಿರುವ ಮಂತ್ರಾಕ್ಷತೆಯನ್ನು ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹೇಳಿದ್ದಾರೆ.
ಶ್ರೀರಾಮನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭವ್ಯ ಶ್ರೀರಾಮ ಮಂದಿರದಲ್ಲಿ ಶೋಭಕೃತ್ ನಾಮ ಸಂವತ್ಸರ, ಪುಷ್ಯ ಮಾಸ, ಶುಕ್ಲಪಕ್ಷ, ದ್ವಾದಶಿಯಂದು ಶ್ರೀ ರಾಮಲಲ್ಲಾ (ಬಾಲರಾಮ) ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಕಳೆದ ಮೂರು ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದಲ್ಲಿ ಕೋಟ್ಯಂತರ ಶ್ರೀರಾಮ ಭಕ್ತರು ಸಮರ್ಪಣೆ ಮಾಡಿದ ಹಣದಿಂದಲೇ ಈ ಮಂದಿರ ನಿರ್ಮಾಣವಾಗಿದೆ. ಇದೀಗ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ರಾಷ್ಟ್ರದ ಪ್ರತಿ ಮನೆಗೂ ಅಯೋಧ್ಯೆಯಿಂದ ಮಂತ್ರಾಕ್ಷತೆಯನ್ನು ತಲುಪಿಸುವ ಯೋಜನೆಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರೂಪಿಸಿದ್ದು, ಈ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ತಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಶ್ವ ಹಿಂದೂ ಪರಿಷತ್ತು ಪರಿವಾರದ ಎಲ್ಲಾ ಸಂಘಟನೆಗಳು ಮತ್ತು ಶ್ರೀರಾಮ ಭಕ್ತರನ್ನು ಜೋಡಿಸಿಕೊಂಡು ಸಂಪರ್ಕ ಅಭಿಯಾನದ ಮೂಲಕ ಆಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರಗಳನ್ನು ತಲುಪಿಸುವ ಯೋಜನೆಯನ್ನು ಜನವರಿ 1ರಿಂದ 15ರವರೆಗೆ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವಂತಹ ಎಲ್ಲಾ ಮನೆಗಳಿಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.