ಬೆಂಗಳೂರು: 1982 ರ ಮೊದಲ ತಿಂಗಳಿನಲ್ಲಿ ನಡೆದ ಒಂದು ಘಟನೆಯಿಂದ ಡಾ.ಎಂ. ಚಿದಾನಂದಮೂರ್ತಿ ಅವರು ಇಡೀ ನಾಡಿಗೆ ಖ್ಯಾತನಾಮರಾದರು.
ಬೆಂಗಳೂರಿನ ದಂಡು ಪ್ರದೇಶದ (ಈಗಿನ ಕಂಟೋನ್ಮೆಂಟ್ ರೈಲ್ವೆ) ಒಂದು ಸಿನಿಮಾ ಮಂದಿರದಲ್ಲಿ ಮುಂಗಡ ಟಿಕೆಟ್ಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಗಿಡ್ಡು ಎತ್ತರದ ಒಬ್ಬ ಕನ್ನಡ ಪ್ರಾಧ್ಯಾಪಕರು, “ನಾಲ್ಕು ಟಿಕೆಟ್ ಕೊಡಿ”ಎಂದು ಕೇಳಿದರು. ಕೌಂಟರ್ನಲ್ಲಿ ಇದ್ದ ವ್ಯಕ್ತಿ ಇಂಗ್ಲಿಷ್ನಲ್ಲಿ ಮಾತನಾಡಲು ಒತ್ತಾಯಿಸಿದ. ಅವರು ಮತ್ತೆ ಕನ್ನಡದಲ್ಲಿ ಕೇಳಿದರು. ಮಾತಿಗೆ ಮಾತು ಬೆಳೆಯಿತು. ಸಿನಿಮಾ ಮಂದಿರದ ಮ್ಯಾನೇಜರ್ ಬಂದ. ಕನ್ನಡದಲ್ಲಿ ಮಾತನಾಡಿದುದಕ್ಕೆ ಅವರನ್ನು ಆವರಣದಿಂದ ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದ. ಅಲ್ಲಿದ್ದ ಕನ್ನಡಿಗರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಇಡೀ ಘಟನೆ ಪ್ರಾಧ್ಯಾಪಕರಲ್ಲಿ ನೋವು, ಕುಪಿತ, ಅಪಮಾನದ ಬೇಗೆ ಉಂಟುಮಾಡಿತ್ತು. ಕನ್ನಡದ ದುಃಸ್ಥಿತಿಯ ಬಗ್ಗೆ ಸಂಕಟ ತರಿಸಿತ್ತು.
ಆಗಲೇ ಅವರು ನಿರ್ಧಾರ ಮಾಡಿದ್ದರು. ಕರ್ನಾಟಕದಾದ್ಯಂತ ಕನ್ನಡದ ಎಚ್ಚರ ಮೂಡಿಸುವ, ಕನ್ನಡಕ್ಕಾಗಿ ತಮ್ಮ ಉಳಿದ ಬದುಕಿನ ವೇಳೆ, ಆಯಸ್ಸುನ್ನು ಮೀಸಲಿಡುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ದೃಢ ಸಂಕಲ್ಪವನ್ನು ಚಿಮೂ ಮಾಡಿದರು. ಇದಕ್ಕೆಂದೇ ಹಂಪಿಯ ಕನ್ನಡ ಭುವನೇಶ್ವರಿಯ ಮುಂದೆ ಪ್ರತಿಜ್ಞೆ ಕೈಗೊಂಡರು. ಪ್ರಾಣತ್ಯಾಗಕ್ಕೆ ಕೂಡ ಸಿದ್ಧರಾಗಿ ತಮ್ಮನ್ನು “ಕನ್ನಡ ಗರುಡ’”ಎಂದು ಭಾವಿಸಿದರು.
ನಾಲ್ಕು ದಶಕಕ್ಕಿಂತ ಹೆಚ್ಚು ಕಾಲ ಅವರು ಕನ್ನಡಕ್ಕಾಗಿ ಶ್ರಮಿಸಿದರು. ತಮ್ಮ ಅಮೂಲ್ಯ ಬರಹ, ಸಂಶೋಧನೆ ತೊರೆದರು. ಬಳಗ ಕಟ್ಟಿದರು. ಕೇಂದ್ರ ಸ್ಥಾಪಿಸಿದರು. ಚಳವಳಿ ಮಾಡಿದರು. ಕನ್ನಡದ ಕಾರಣಕ್ಕೆ, ಸಮಸ್ಯೆಗಳ ಪರಿಹಾರಕ್ಕೆ ನೂರಾರು ಕಾರ್ಯಕರ್ತರನ್ನು ಸಂಘಟಿಸಿದರು. ಕನ್ನಡ ಮಾಧ್ಯಮ, ಕನ್ನಡ ಶಾಲೆ, ಕನ್ನಡಿಗರಿಗೆ ಉದ್ಯೋಗ, ಕರ್ನಾಟಕದ ನೆಲಜಲಗಳ ಹಕ್ಕುಗಳಿಗೆ ಹೋರಾಡಿದರು. ಇದರಿಂದ ಕನ್ನಡದ ಬಗ್ಗೆ ಕರ್ನಾಟಕದಲ್ಲಿ ಸಮಗ್ರ ಜಾಗೃತಿ ಆಗದಿದ್ದರೂ ಸಾಮಾನ್ಯ ಎಚ್ಚರ ಮೂಡಿತು.
ಕಳೆದ ಹಲವು ದಶಕಗಳಲ್ಲಿ ಚಿದಾನಂದ ಮೂರ್ತಿ ಕನ್ನಡ - ಕರ್ನಾಟಕದ ಉಳಿವಿಗೆ ಮಾಡಿದ ಹೋರಾಟ ಪ್ರತ್ಯೇಕ ಉಲ್ಲೇಖಕ್ಕೆ ಅರ್ಹವಾದದ್ದು. 1982ರಲ್ಲಿ ಗೋಕಾಕ್ ವರದಿಯ ಜಾರಿಗೆ ಕನ್ನಡ ಸಾಹಿತಿಗಳು, ಕಲಾವಿದರು ಹೋರಾಟ ಹೂಡಿದರು. ಅದೇ ವರ್ಷದ ಎಪ್ರಿಲ್ 13ರಂದು ‘ಸಾಹಿತಿಗಳ ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು. ಚಿದಾನಂದಮೂರ್ತಿಯವರು ಕನ್ನಡ ಚಳವಳಿಯ ಹೊಸ ನಾಯಕರಾದರು.ಗೋಕಾಕ್ ಚಳವಳಿಯಲ್ಲಿ ಮೂರ್ತಿ ಅವರು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನ ಕನ್ನಡ ಚಳವಳಿಗೆ ಹೊಸ ರೂಪ ವರ್ಚಸ್ಸು, ಗೌರವಗಳನ್ನು ತಂದಿದ್ದವು. ಕನ್ನಡ ಚಳವಳಿಯ ಬಗ್ಗೆ ಜನಸಾಮಾನ್ಯರಲ್ಲಿದ್ದ ಕೀಳು ಮನೋಭಾವ ಹೋಗಲಾಡಿಸುವಲ್ಲಿ ಚಿಮೂ ಅವರ ಪಾತ್ರ ದೊಡ್ಡದು.