ಬೆಂಗಳೂರು: ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರಲಿದ್ದು, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವ ಜವಾಬ್ದಾರಿ ಪತ್ರಕರ್ತರ ಮೇಲಿರಲಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಅತ್ಯಂತ ಯೋಗ್ಯ ವಿಧಾನದಲ್ಲಿ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿರುವ ಪ್ರಕರಣ ರದ್ದು ಕೋರಿ ವಿವಿಧ ಪತ್ರಿಕೆಗಳ ಸಂಪಾದಕರು ಮತ್ತು ವರದಿಗಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಮಾಧ್ಯಮಗಳಲ್ಲಿ ತಾಲಿಬಾನ್, ಗೂಂಡಾ, ಪುಂಡಾಟಿಕೆ ಎಂಬ ಪದಗಳ ಬಳಕೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.
ಪತ್ರಕರ್ತರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕರ ಅಗತ್ಯತೆಗಳನ್ನು ಪೂರೈಸುತ್ತವೆ. ಈ ಸುದ್ದಿಗಳು ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರುತ್ತವೆ. ಹೀಗಾಗಿ ಸುದ್ದಿ ಮಾಧ್ಯಮಗಳು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸೂಚಿಸಿದೆ.
ಪತ್ರಿಕಾರಂಗ ಮತ್ತು ಪತ್ರಕರ್ತರನ್ನು ಪ್ರಜಾಪ್ರಭುತ್ವದ 4ನೇ ಅಂಗ ಎಂಬುದಾಗಿ ಕರೆಯಲಾಗುತ್ತದೆ. ಹೀಗಾಗಿ ಸುದ್ದಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಪ್ರಕಟಿಸುವ ಮೂಲಕ ತನ್ನ ಕಾರ್ಯವನ್ನು ನಿರ್ವಹಣೆ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಪತ್ರಿಕೆಯಲ್ಲಿ ಪ್ರಕಟಿಸಿದ ಸುದ್ದಿಯನ್ನು ದೃಢೀಕರಣ ಅಥವಾ ಪರಿಶೀಲಿಸಿದ ಬಳಿಕ ಸತ್ಯವೆಂದು ನಂಬುವಂತ ವರ್ಗ ಇಂದಿಗೂ ಸಮಾಜದಲ್ಲಿ ಇದೆ. ಮಾಧ್ಯಮಗಳ ಮೇಲೆ ದೇಶದ ಜನ ಸಾಮಾನ್ಯರು ವಿಶ್ವಾಸವಿಟ್ಟಿರುವ ಸಂದರ್ಭದಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಅಸಂಸದೀಯ ಅಥವಾ ಅವಹೇಳನಾಕಾರಿ ಪದಗಳನ್ನು ಬಳಸುವಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕಾರ್ಯನಿರ್ವಹಿಸುವವರ ಜವಾಬ್ದಾರಿ ಮೇಲಿದೆ. ಅತ್ಯಂತ ಸಂಯಮದಿಂದ ತನ್ನ ಕಾರ್ಯವನ್ನು ನಿರ್ವಹಿಸಬೇಕು ಎಂದು ಪೀಠ ಹೇಳಿದೆ.
ಪ್ರಸ್ತುತದ ಪ್ರಕರಣ 2012ರಲ್ಲಿ ನಡೆದಿದೆ. ಈಗಾಗಲೇ ಅರ್ಜಿದಾರರು ಪ್ರಮಾಣ ಪತ್ರದ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದು, ಮುಂದೆ ಈ ರೀತಿಯ ಘಟನೆಗಳನ್ನು ಪುನರಾವರ್ತನೆ ಮಾಡದಂತೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಸುದ್ದಿ ಪ್ರಕಟಿಸುತ್ತಾರೆ ಎಂಬುದಾಗಿ ಭರವಸೆಯಿದೆ ಎಂದು ತಿಳಿಸಿ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.