ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮತದಾರ ಪಟ್ಟಿ ಸೇರ್ಪಡೆ ರದ್ದತಿ ಸಂಬಂಧಿಸಿದಂತೆ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಂಬಂಧಪಟ್ಟ ಅಧಿಕಾರಿಗಳ ಜೊತೆ ರಾಜಾಜಿನಗರ ಹಾಗೂ ಯಶವಂತಪುರ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡಿ ನಮೂನೆಗಳ ಪರಿಶೀಲನೆ ನಡೆಸಿದರು.
ರಾಜಾಜಿನಗರ ವ್ಯಾಪ್ತಿಯಲ್ಲಿ 7 ಮನೆಗಳಿಗೆ ಭೇಟಿ ನೀಡಿ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡು ಮಾಡಿರುವ ನಮೂನೆಗಳನ್ನು ಪರಿಶೀಲಿಸಿ ಬಿ.ಎಲ್.ಒ ಗಳು ಎಲ್ಲಾ ಸರಿಯಾದ ಕ್ರಮದಲ್ಲಿ ಮಾಡಿರುವುದನ್ನು ಗಮನಿಸಿ ನಮೂನೆಯಲ್ಲಿ ದೃಢೀಕರಿಸಿ ನಮೂನೆ ಸಲ್ಲಿಸಿರುವವರಿಂದ ಸಹಿ ಪಡೆದುಕೊಳ್ಳಲಾಯಿತು.
ಮೊದಲಿಗೆ ರಾಜಾಜಿನಗರ ವಾರಿಯರ್ ಬೇಕರಿ ಬಳಿಯ ಮನೆಗೆ ಭೇಟಿ ನೀಡಿ ನಮೂನೆಯನ್ನು ಪರಿಶೀಲಿಸಿ, ನಮೂನೆಯ ಪ್ರತಿಯಲ್ಲಿ ಎಲ್ಲವೂ ಸರಿಯಾಗಿರುವುದನ್ನು ಗಮನಿಸಿ ಮುಖ್ಯ ಆಯುಕ್ತರು ನಮೂನೆಯನ್ನು ದೃಢೀಕರಿಸಿ ಸಹಿ ಪಡೆದುಕೊಳ್ಳಲಾಯಿತು.
ಉಳಿದಂತೆ ರಾಜಾಜಿನಗರ ಹಾಗೂ ಶಿವನಹಳ್ಳಿ ವ್ಯಾಪ್ತಿಯಲ್ಲಿ 5 ಮನೆಗಳಿಗೆ ಭೇಟಿ ನೀಡಿ ನಮೂನೆಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಹಾಗೂ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡುಗಳಲ್ಲಿ ಯಾವುದೇ ಲೋಪಗಳಿಲ್ಲದಂತೆ ಪರಿಶೀಲಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಯುತ್ತಿದೆ. ಮತದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಖುದ್ದಾಗಿ 10 ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಹಾಗೂ ಕಛೇರಿಯಲ್ಲಿ 52 ನಮೂನೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.