ಕರ್ನಾಟಕ

karnataka

ETV Bharat / state

ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧ: ಅಪಘಾತಮುಕ್ತ ಹೊಸ ವರ್ಷಾಚರಣೆಗೆ ಕರೆ ನೀಡಿದ ಬೆಂಗಳೂರು ಸಂಚಾರಿ ಪೊಲೀಸರು

ಹೊಸ ವರ್ಷಾಚರಣೆ ವೇಳೆ ವಾಹನಗಳ ಅಪಘಾತ ತಪ್ಪಿಸಲು ಬೆಂಗಳೂರು ಸಂಚಾರಿ ಪೊಲೀಸರು ಸಂಚಾರದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ.

Bangalore Traffic Police
ಬೆಂಗಳೂರು ಸಂಚಾರಿ ಪೊಲೀಸರು

By ETV Bharat Karnataka Team

Published : Dec 26, 2023, 2:00 PM IST

Updated : Dec 26, 2023, 7:31 PM IST

ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್

ಬೆಂಗಳೂರು:ಹೊಸ ವರ್ಷಚರಣೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಾಹನ ಸವಾರರು ಮತ್ತು ಪಾದಚಾರಿಗಳು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮತ್ತು ಚರ್ಚ್ ಸ್ಟ್ರೀಟ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವುದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಬೆಂಗಳೂರು ಸಂಚಾರಿ ಪೊಲೀಸರು ಕೆಲ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ.

ವಾಹನ ಪ್ರವೇಶ ನಿರ್ಬಂಧಿತ ಸ್ಥಳಗಳು:

  • ಡಿಸೆಂಬರ್​ 31ರ ಸಂಜೆ 4 ಗಂಟೆಯಿಂದ ಜನವರಿ 1ರ ಬೆಳಗ್ಗೆ 3 ಗಂಟೆಯವರೆಗೂ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್​ವರೆಗೆ ನಿರ್ಬಂಧ.
  • ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್​ನಿಂದ ಒಪೇರಾ ಜಂಕ್ಷನ್​ವರೆಗೆ ನಿರ್ಬಂಧ.
  • ಚರ್ಚ್ ಸ್ಟ್ರೀಟ್‌ನ ಬ್ರಿಗೇಡ್ ರಸ್ತೆ ಜಂಕ್ಷನ್​ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ ನಿರ್ಬಂಧ.
  • ಮ್ಯೂಸಿಯಂ ರಸ್ತೆಯ ಎಂ.ಜಿ.ರಸ್ತೆ ಜಂಕ್ಷನ್​ನಿಂದ ಹಳೇ ಮದ್ರಾಸ್ ಬ್ಯಾಂಕ್​ ರಸ್ತೆಯ (ಎಸ್.ಬಿ.ಐ) ವೃತ್ತದವರೆಗೆ ನಿರ್ಬಂಧ.
  • ರೆಸ್ಟ್ ಹೌಸ್ ರಸ್ತೆಯ ಮ್ಯೂಸಿಯಂ ರಸ್ತೆ ಜಂಕ್ಷನ್​ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್​ವರೆಗೆ ನಿರ್ಬಂಧ.
  • ರೆಸಿಡೆನ್ಸಿ ಕ್ರಾಸ್​ ರಸ್ತೆಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರ)ದವರೆಗೆ ಪೊಲೀಸ್ ವಾಹನಗಳು ಹಾಗು ಕರ್ತವ್ಯ ನಿರತ ತುರ್ತುಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರಲಿದೆ.

ವಾಹನ‌ಗಳ ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳು:

  • ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದವರೆಗೆ ನಿರ್ಬಂಧ.
  • ಬ್ರಿಗೇಡ್ ರಸ್ತೆಯ ಆರ್ಟ್ಸ್ & ಕ್ರಾಫ್ಟ್ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ ವರೆಗೆ ನಿರ್ಬಂಧ.
  • ಚರ್ಚ್ ಸ್ಟ್ರೀಟ್‌ನ ಬ್ರಿಗೇಡ್ ರಸ್ತೆ ಜಂಕ್ಷನ್​ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್​​ವರೆಗೆ ನಿರ್ಬಂಧ.
  • ರೆಸ್ಟ್ ಹೌಸ್ ರಸ್ತೆಯ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ ನಿರ್ಬಂಧ.

ಮ್ಯೂಸಿಯಂ ರಸ್ತೆಯ ಎಂ.ಜಿ ರಸ್ತೆ ಜಂಕ್ಷನ್‌ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದ ವರೆಗೆ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತುಸೇವಾ ವಾಹನಗಳನ್ನ ಹೊರತುಪಡಿಸಿ ಉಳಿದ ವಾಹನಗಳ ನಿಲುಗಡೆಗೆ ನಿಷೇಧ ಇರಲಿದೆ. ಮತ್ತು ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ, ರಸ್ತೆ & ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ಈಗಾಗಲೇ ನಿಲ್ಲಿಸಲಾಗಿರುವ ವಾಹನಗಳ ಚಾಲಕರು/ಮಾಲೀಕರು ಡಿಸೆಂಬರ್ 31ರಂದು ಸಂಜೆ 4:00 ಗಂಟೆಯೊಳಗೆ ತಮ್ಮ ವಾಹನಗಳನ್ನು ತೆರುವುಗೊಳಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಭ್ರಮಾಚರಣೆ ಮುಗಿಸಿ ತೆರಳುವವರಿಗೆ ಸೂಚನೆಗಳು:ಡಿಸೆಂಬರ್ 31ರಂದು ರಾತ್ರಿ 10-00 ಗಂಟೆಯ ನಂತರ ಸಂಚರಿಸುವವರು ಎಂ.ಜಿ ರಸ್ತೆಯ ಕ್ಲೀನ್ಸ್ ವೃತ್ತದ ಕಡೆಯಿಂದ - ಹಲಸೂರು ಹಾಗು ಇನ್ನು ಮುಂದಕ್ಕೆ ಹೋಗುವವರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ -ಬಿ.ಆರ್.ವಿ ಜಂಕ್ಷನ್​ ಬಲ ತಿರುವು ಕಬ್ಬನ್ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.

ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ -ಡಿಕೆನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬಹುದು.

ಕಾಮರಾಜ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್​ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್​ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಇರಲಿದೆ. ಅಲ್ಲದೇ ಶಿವಾಜಿನಗರ ಬಿಎಂಟಿಸಿ ಶಾಫಿಂಗ್ ಕಾಂಪ್ಲೆಕ್ಸ್​ನ 1ನೇ ಮಹಡಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶವಿರಲಿದೆ.

ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಡಿಸೆಂಬರ್​ 31ರ ರಾತ್ರಿ 11ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ ಹೊರತು ಪಡಿಸಿ ನಗರದ ಎಲ್ಲ ಮೇಲ್ಸೇತುವೆಗಳ ಮೇಲೆ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವೀಲಿಂಗ್ /ಡ್ರ್ಯಾಗ್ ರೇಸ್​ನಲ್ಲಿ ಭಾಗಿಯಾಗಿ ಇತರ ಸಾರ್ವಜನಿಕರಿಗೆ ಅನಾನುಕೂಲ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮತ್ತು ಇಂತಹ ಘಟನೆಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಮಾಹಿತಿ ನೀಡಲು ಕೋರಲಾಗಿದೆ.

ಅಲ್ಲದೆ ಸ್ನೇಹಿತರು ಗುಂಪಾಗಿ ಸಂಭ್ರಮಾಚರಣೆ ಮಾಡುವಾಗ, ನಂತರ ವಾಹನ ಚಾಲನೆ ಮಾಡುವವರು ಮದ್ಯಪಾನ ಮಾಡದಿರುವ ಹಾಗೆ ನೋಡಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಅವರವರ ಮನೆಗಳಿಗೆ ಸುರಕ್ಷಿತವಾಗಿ ಸೇರುವಂತೆ ತನ್ನ ಮತ್ತು ಇತರ ವಾಹನಗಳು ಹಾಗೂ ಪಾದಚಾರಿಗಳ ಸುರಕ್ಷತೆ ಕಾಪಾಡುವಂತೆ, ಹೊಸ ವರ್ಷಾಚರಣೆಯನ್ನು ಅಪಘಾತ ಮುಕ್ತವಾಗಿ ಮಾಡುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ವರ್ಷಾಂತ್ಯಕ್ಕೆ ಸಾಲು ಸಾಲು ರಜೆ: ಗೋವಾ ಬಿಟ್ಟು ಕಡಲನಗರಿಯತ್ತ ಮುಖ ಮಾಡಿದ ಪ್ರವಾಸಿಗರು

Last Updated : Dec 26, 2023, 7:31 PM IST

ABOUT THE AUTHOR

...view details