ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿರುವ ವಾಹನ ಸವಾರರ ಲೈಸನ್ಸ್ ರದ್ದು ಮಾಡಿ ಆರ್ಟಿಒ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಪೊಲೀಸರು ಬೈಕ್ನಲ್ಲಿ ಸ್ಟಂಟ್ ಮಾಡುವವರು, ಕುಡಿದು ವಾಹನ ಚಾಲನೆ ಮಾಡಿದವರ ಬೈಕ್ ಸೀಜ್ ಮಾಡುವುದರ ಜೊತೆಗೆ ಲೈಸನ್ಸ್ ಜಪ್ತಿ ಮಾಡಿದ್ದರು. ವಶಪಡಿಸಿಕೊಂಡ ಲೈಸನ್ಸ್ಗಳನ್ನು ಆರ್ಟಿಒಗೆ ಟ್ರಾಫಿಕ್ ಇಲಾಖೆ ಕಳುಹಿಸಿತ್ತು. ಈಗ ನಿಯಮ ಮೀರಿದವರ ಲೈಸನ್ಸ್ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. 2018ರಲ್ಲಿ 19 ಸಾವಿರದ 431 ಡ್ರೈವಿಂಗ್ ಲೈಸನ್ಸ್ಗಳನ್ನು ಟ್ರಾಫಿಕ್ ಪೊಲೀಸರು ಕಳುಹಿಸಿದ್ದರು. ಅದರಲ್ಲಿ 5 ಸಾವಿರದ 899 ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗಿತ್ತು.
2019ರಲ್ಲಿ 7 ಸಾವಿರದ 149 ಲೈಸನ್ಸ್ ರದ್ದು ಮಾಡಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದರು. ಇದರಲ್ಲಿ ಕೇವಲ 944 ಡ್ರೈವಿಂಗ್ ಲೈಸನ್ಸ್ಗಳನ್ನು ಆರ್ಟಿಒ ರದ್ದು ಮಾಡಿತ್ತು. ಹಾಗೆಯೇ ಕಳೆದ ತಿಂಗಳು 3 ಸಾವಿರದ 900 ಡ್ರೈವಿಂಗ್ ಲೈಸನ್ಸ್ ರದ್ಧತಿಗೆ ಕಳಿಸಲಾಗಿತ್ತು. ಈಗ ಮತ್ತೆ 838 ಲೈಸನ್ಸ್ ರದ್ದು ಮಾಡಿ ಆರ್ಟಿಒ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪರವಾನಗಿ ಹೇಗೆ ರದ್ದು ಮಾಡಲಾಗುತ್ತದೆ ಎಂದು ಗಮನಿಸುವುದಾದರೆ ಟ್ರಾಫಿಕ್ ಪೊಲೀಸರು ಮೊದಲು ಒರಿಜಿನಲ್ ಲೈಸನ್ಸ್ ಕಲೆಕ್ಟ್ ಮಾಡುತ್ತಾರೆ. ಲೈಸನ್ಸ್ಗಳನ್ನು ಆರ್ಟಿಒ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಲೈಸನ್ಸ್ ರದ್ದು ಮಾಡಲು ಸೂಕ್ತ ಕಾರಣ ಕೊಟ್ಟು ರದ್ಧತಿಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಕಾರಣ ನಿಜವೇ ಆಗಿದ್ದರೆ 6 ತಿಂಗಳು ಲೈಸನ್ಸ್ ರದ್ದು ಮಾಡಲಾಗುತ್ತದೆ. ಇದಾದ ಬಳಿಕ ಹೊಸ ಲೈಸನ್ಸ್ಗೆ ಇಂತಿಷ್ಟು ಹಣ ಪೇ ಮಾಡಬೇಕಾಗುತ್ತೆ.