ಬೆಂಗಳೂರು : ಖಾಸಗಿ ಕಂಪನಿಗಳಲ್ಲಿ ವಾಹನ ವಿಮೆ ಮಾಡಿಸುವ ಗ್ರಾಹಕರೇ ಎಚ್ಚರ. ನಾಲ್ಕುಚಕ್ರದ ವಾಹನಗಳಿಗೆ ವಿಮೆ ಮಾಡಿಸಿದರೆ ನಿಮ್ಮ ವಾಹನಕ್ಕೆ ದ್ವಿಚಕ್ರ ವಾಹನದ ವಿಮೆ ಕಟ್ಟುತ್ತಾರೆ. ಬೆಂಗಳೂರಿನಲ್ಲಿ ಇಂತಹ ಅಕ್ರಮ ವಿಮೆ ಬದಲಾಯಿಸುವ ಬೃಹತ್ ಜಾಲವಿರುವುದು ಪತ್ತೆಯಾಗಿದೆ.
ವಾಹನ ವಿಮೆ ಪಾವತಿಯಾದ ತಕ್ಷಣ ಆರ್ ಟಿಓ ಆನ್ಲೈನ್ ದಾಖಲೆಯಲ್ಲಿ ವಿಮೆಯ ಅವಧಿ ನಮೂದಾಗುತ್ತದೆ. ಆದರೆ, ಯಾವ ಮೊತ್ತದ ವಿಮೆ ಎಂಬುದು ಗೊತ್ತಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ವಾಣಿಜ್ಯ ಕಾರುಗಳಿಗೆ ಬೈಕ್ ಇನ್ಸ್ಯೂರೆನ್ಸ್ ಪಾವತಿ ಮಾಡುತ್ತಿದ್ದ ಆರೋಪಿ ಇರ್ಫಾನ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತವಾಗಿ ವಿಮಾ ಹಕ್ಕು ಪಡೆಯಲು ಹೋದಾಗ ಈತನ ಮೋಸ ಬೆಳಕಿಗೆ ಬಂದಿದೆ.
ಅಕೋ ಜನರಲ್ ಇನ್ಸ್ಯೂರೆನ್ಸ್ ಎಂಬ ಖಾಸಗಿ ವಿಮಾ ಕಂಪನಿಗೆ ಇದುವರೆಗೂ ಎರಡು ಕೋಟಿ ಮೌಲ್ಯದ ನಕಲಿ ವಿಮೆ ಮಾಡಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಅಕೋ ಜನರಲ್ ಇನ್ಸ್ಯೂರೆನ್ಸ್ ಕಂಪನಿಯು ಸಿಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿತ್ತು. ದೂರಿನನ್ವಯ ಆರೋಪಿ ಇರ್ಫಾನ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ.