ಬೆಂಗಳೂರು: ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ತೊಂದರೆ ಎದುರಾಗಿದೆ. ತರಕಾರಿ ಹಾಗೂ ನಿತ್ಯ ಬಳಸುವ ವಸ್ತುಗಳು ಆಗಸಕ್ಕೇರಿದ ಹಿನ್ನೆಲೆ ತರಕಾರಿ ಖರೀದಿಗೆ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಬಂದಿದೆ. ದುಬಾರಿ ಬೆಲೆ ಕಾರಣ ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ ಎದುರಾಗಿದೆ. ಅಂಗನವಾಡಿ ಕೇಂದ್ರಗಳು ನೀಡುತ್ತಿರುವ ಊಟದಲ್ಲಿ ತರಕಾರಿ ತುಂಡುಗಳೇ ನಾಪತ್ತೆ ಆಗುತ್ತಿದೆ. ಅಂಗನವಾಡಿ ಕೇಂದ್ರಗಳು ಬರಿ ಅನ್ನ ಮತ್ತು ತಿಳಿಸಾರು ಮೊರೆ ಹೋಗುತ್ತಿದ್ದಾರೆ.
ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರಕ್ಕಾಗಿ ಸೊಪ್ಪು, ತರಕಾರಿ ನೀಡಲಾಗುತ್ತದೆ. ಇದರಲ್ಲಿ ಹೆಚ್ಚು ಸೊಪ್ಪನ್ನು ನೀಡಲಾಗುತ್ತದೆ. ಆದರೆ, ಈಗ ತರಕಾರಿ, ಸೊಪ್ಪು ಎಂಬುದು ಗಗನಕುಸುಮವಾಗಿದೆ. ಇದರಿಂದ ಅಂಗನವಾಡಿಗಳಲ್ಲಿ ಬೇಳೆ ಸಾರನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಹಾಗೂ ಪೌಷ್ಟಿಕತೆ ಹೆಚ್ಚಿಸಲು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೋಷಣ್ ಅಭಿಯಾನ ಯೋಜನೆ ಜಾರಿಗೆ ತಂದಿತ್ತು.
ಶಿಶು ಮತ್ತು ತಾಯಿಯ ಮರಣ ಪ್ರಮಾಣವನ್ನು ತಗ್ಗಿಸಲು ಈ ಯೋಜನೆ ಆರಂಭಿಸಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಊಟದ ವ್ಯವಸ್ಥೆೆ ಮಾಡಲಾಗಿತ್ತು. ಅ ಊಟದಲ್ಲಿ ಪೋಷಕಾಂಶ ಭರಿತ ಸೊಪ್ಪು, ತರಕಾರಿ ಬೇಯಿಸಿ ಅಡುಗೆ ಉಣ ಬಡಿಸಲಾಗುತ್ತಿತ್ತು. ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದಲ್ಲಿ ಸಾಲ ಪಡೆದುಕೊಂಡು ಬನ್ನಿ. ಇಲ್ಲವೇ ನೀವೇ ಹಣ ಭರಿಸಿ ನಂತರ ಸರ್ಕಾರದಿಂದ ಕೊಡಲಾಗುತ್ತದೆ ಎಂಬ ಸಿದ್ದ ಉತ್ತರ ಅಧಿಕಾರಿಗಳಿಂದ ಸಿಗುತ್ತಿದೆ.