ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು, ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆ ವಿಜ್ಞಾನ ನಗರ ವಾರ್ಡ್ನ ನಾಲ್ಕು ಸಾವಿರ ಕುಟುಂಬಗಳಿಗೆ ಸಮಾಜ ಸೇವಕರಾದ ಲೋಕೇಶ್ ಗೌಡ ಹಾಗೂ ಮಂಜುಳಾ ಲೋಕೇಶ್ ಗೌಡ ದಂಪತಿ ತರಕಾರಿಗಳನ್ನು ವಿತರಿಸಿದ್ದಾರೆ.
ವಾರ್ಡ್ನಲ್ಲಿ ಮನೆಯಲ್ಲೇ ಇರುವ ಬಡ ಕುಟುಂಬಗಳಿಗೆ ಒಂದು ವಾರಕ್ಕಾಗುವಷ್ಟು ಒಂದು ಕುಟುಂಬಕ್ಕೆ ಸುಮಾರು 10 ಕೆಜಿಯಷ್ಟು ನೀಡಿದ್ದಾರೆ. ರೈತರಿಂದ ನೇರವಾಗಿ 44 ಟನ್ ತರಕಾರಿ ಖರೀದಿಸಿದ್ದಾರೆ. ಬದನೆಕಾಯಿ, ಟೊಮೇಟೊ, ಈರುಳ್ಳಿ, ಎಲೆಕೋಸು, ಮೂಲಂಗಿ, ಕ್ಯಾರೆಟ್, ಕುಂಬಳಕಾಯಿ, ಮೆಣಸಿನಕಾಯಿ, ಕ್ಯಾಪ್ಸಿಕಂ ಹಾಗೂ ಎಲೆಕೋಸು ಸೇರಿದಂತೆ ವಿವಿಧ ಹತ್ತು ತರಹದ ತರಕಾರಿಗಳನ್ನು ಖರೀದಿಸಿ, ವಿಜ್ಞಾನನಗರದ ಬಡವರಿಗೆ ವಿತರಣೆ ಮಾಡಿದ್ದಾರೆ. ಇನ್ನು ತರಕಾರಿಗಳನ್ನು ಪಡೆಯಲು ಜನರು ಸುಮಾರು ಮೂರು ಕಿ.ಮೀ. ಸಾಲಿನಲ್ಲಿ ನಿಂತು ಯಾವುದೇ ನೂಕುನುಗ್ಗಲು ಇಲ್ಲದೇ ಪಡೆದುಕೊಂಡಿದ್ದಾರೆ.
ಐದು ಲಕ್ಷ ಮೌಲ್ಯದ ತರಕಾರಿಗಳನ್ನು ನಾಲ್ಕು ಸಾವಿರ ಕುಟುಂಬಕ್ಕೆ ವಿತರಿಸಿದ ದಂಪತಿ ಇನ್ನು ಸಮಾಜ ಸೇವಕ ಜಿ. ಲೋಕೇಶ ಗೌಡ ಮಾತನಾಡಿ, ಲಾಕ್‌ಡೌನ್ ಘೋಷಣೆಯಾದ ದಿನದಿಂದಲೂ, ಪ್ರತಿ ಮಂಗಳವಾರ ನಾಲ್ಕು ಸಾವಿರ ಬಡ ಕುಟುಂಬಗಳಿಗೆ ಒಂದು ವಾರಕ್ಕಾಗುವಷ್ಟು ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಕಿಟ್ಗಳನ್ನು ವಿತರಣೆ ಮಾಡುತ್ತಿದ್ದೇನೆ. ಸಚಿವ ಬಿ.ಎ. ಬಸವರಾಜ ಹಾಗೂ ಪಾಲಿಕೆ ಸದಸ್ಯ ಎಸ್.ಜಿ. ನಾಗರಾಜ್ ಅವರು ನಮ್ಮ ಸೇವಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದರು. ಹತ್ತು ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಲಾಕ್‌ಡೌನ್ ಮುಗಿದ ನಂತರ ಮುಂದಿನ ಹದಿನೈದು ದಿನಗಳವರೆಗೆ ಉಚಿತವಾಗಿ ದಿನಸಿ ಹಾಗೂ ತರಕಾರಿ, ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ವಿತರಣೆ ಮಾಡಲಾಗುವುದು ಎಂದರು.
ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಬಡವರಿಗೆ ವಿತರಿಸಲಾಗುತ್ತಿದೆ. ಮನೆಯಿಂದ ಯಾರೂ ಅನವಶ್ಯಕವಾಗಿ ಹೊರಗೆ ಬರಬೇಡಿ. ಹೊರಗೆ ಬಂದ್ರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಹಾಮಾರಿ ಕೊರೊನಾ ಸೋಂಕು ತಡೆಯಬೇಕೆಂದು ಮನವಿ ಮಾಡಿದರು.