ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ರೇವ್ ಪಾರ್ಟಿ ಆಯೋಜಕ ವಿರೇನ್ ಖನ್ನಾ ವಿಚಾರಣೆ ಮಾಡುವಲ್ಲಿ ಸಿಸಿಬಿ ಪೊಲೀಸರು ಹೈರಾಣಾಗಿದ್ದಾರೆ.
ಸಿಸಿಬಿ ಪೊಲೀಸರು ಈಗಾಗಲೇ ಎರಡು ಬಾರಿ ಖನ್ನಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆ ಮಾಡುತ್ತಿದ್ದರೋ ಅಥವಾ ಇಲ್ಲವೋ ಎಂಬ ಬಗ್ಗೆ ಕಿಂಚಿತ್ತೂ ಬಾಯ್ಬಿಡದೆ ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಪೊಲೀಸರು ಎಷ್ಟೇ ತಾಳ್ಮೆಯಿಂದ ಕೇಳಿದರೂ ಹಾಗೂ ಪೊಲೀಸ್ ಭಾಷೆಯಲ್ಲಿ ಟ್ರೀಟ್ಮೆಂಟ್ ಕೊಟ್ಟು ವಿಚಾರಣೆ ನಡೆಸಿದರೂ ಸಹ ಖನ್ನಾ ಮಾತ್ರ ಬಗ್ಗುತ್ತಿಲ್ಲವಂತೆ. ಪ್ರಕರಣ ಸಂಬಂಧ ಯಾವುದೇ ಉತ್ತರ ನೀಡದೆ, ತನ್ನ ದರ್ಪ ತೋರುವ ಮೂಲಕ ಸಿಸಿಬಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ನಗರದ ಹೊರವಲಯದಲ್ಲಿ ಆಫ್ಟರ್ ನೈಟ್ ಪಾರ್ಟಿಗಳನ್ನ ಆಯೋಜನೆ ಮಾಡ್ತಿದ್ದ ಖನ್ನಾ, ಡ್ರಗ್ಸ್ ಕೂಡ ಸಪ್ಲೈ ಮಾಡ್ತಿದ್ದ ಎನ್ನಲಾಗಿದೆ. ಆದರೆ ವಿಚಾರಣೆ ವೇಳೆ ಪಾರ್ಟಿಗೆ ಯಾರೆಲ್ಲಾ ಬಂದು ಹೋಗಿದ್ದಾರೆ ಎಂಬ ಬಗ್ಗೆ ತಿಳಿಸಿದ್ದಾನೆಯೇ ಹೊರತು ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡಲಾಗುತ್ತಿತ್ತಾ ಎಂಬ ಬಗ್ಗೆ ಬಾಯ್ಬಿಡುತ್ತಿಲ್ಲ ಎನ್ನಲಾಗ್ತಿದೆ.
ಸಿಸಿಬಿ ಕಲೆ ಹಾಕಿರುವ ಮಾಹಿತಿ ಪ್ರಕಾರ ಖನ್ನಾ ಈವರೆಗೆ 150ಕ್ಕೂ ಹೆಚ್ಚು ಬಿಂದಾಸ್ ಪಾರ್ಟಿಗಳನ್ನ ಆಯೋಜನೆ ಮಾಡಿ ಸೆಲೆಬ್ರಿಟಿಗಳಿಗೆ ಆಹ್ವಾನ ಮಾಡಿದ್ದಾನೆ. ಈ ಎಲ್ಲಾ ಪಾರ್ಟಿಗಳು ಆಫ್ಟರ್ ನೈಟ್ ಪಾರ್ಟಿಯಾಗಿದ್ದು, ಮಧ್ಯರಾತ್ರಿಯಿಂದ ಬೆಳಿಗ್ಗೆವರೆಗೂ ಮಾದಕವಸ್ತುಗಳ ಬಳಕೆ ಮಾಡಿರುವ ಬಗ್ಗೆ ಸಿಸಿಬಿಗೆ ಸಾಕ್ಷಿ ದೊರೆತಿದೆ ಎಂದು ಹೇಳಲಾಗ್ತಿದೆ. ಇದರ ಬಗ್ಗೆ ವಿರೇನ್ ಖನ್ನಾ ಬಾಯಿ ಬಿಡಿಸಲು ಸಿಸಿಬಿ ಇನ್ನಿಲ್ಲದ ಕಸರತ್ತು ಮಾಡಿದ್ದರೂ ಸಹ ಈತ ಮಾತ್ರ ಯಾವ ಅಸ್ತ್ರಕ್ಕೂ ಕಿಮ್ಮತ್ತು ಕೊಡದಿರುವುದು ತನಿಖಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.
ಖನ್ನಾಗೆ ಮಂಪರು ಪರೀಕ್ಷೆ ನಡೆಸಲು ಸಿಸಿಬಿ ಸಜ್ಜು:
ಡ್ರಗ್ಸ್ ಮಾಫಿಯಾದ ನಿಜ ಬಣ್ಣ ತಿಳಿಯಲು ವಿರೇನ್ ಖನ್ನಾನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಸಿಸಿಬಿ ತಯಾರಿ ನಡೆಸಿದ್ದು, ಈಗಾಗಲೇ ನ್ಯಾಯಾಲಯದ ಅನುಮತಿಯನ್ನು ಸಹ ಪಡೆದಿದೆ. ಆದರೆ ಮಂಪರು ಪರೀಕ್ಷೆಗೆ ಒಳಗಾಗುವ ಬದಲು ಸತ್ಯ ಬಾಯ್ಬಿಡುವಂತೆ ಖನ್ನಾಗೆ ಪೊಲೀಸರು ಹೇಳಿದ್ದಾರೆ. ಆದರೆ ಖನ್ನಾ ಮಾತ್ರ ಪೊಲೀಸರ ಮಾತಿಗೆ ಕಿಂಚಿತ್ತು ಬೆಲೆ ಕೊಡದಿರುವುದು, ಯಾವುದೇ ವಿಚಾರ ಹೊರಹಾಕದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಇದೀಗ ಖನ್ನಾನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿದ್ದು, ಪರಿಕ್ಷೆಗೆ ಒಳಪಡಿಸಿ ವಿರೇನ್ ಖನ್ನಾ ನಿಜ ಬಣ್ಣ ಬಯಲು ಮಾಡುವ ಸಾಧ್ಯತೆ ಇದೆ.