ಬೆಂಗಳೂರು: ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕ ಅಧ್ಯಕ್ಷೆ ವೀಣಾ ಕಾಶಪ್ಪನವರ್ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರು ನೀಡಿದ ನಂತರ ಮಾತನಾಡಿದ ಅವರು, ಇವತ್ತು ಮಹಿಳಾ ಆಯೋಗಕ್ಕೆ ಮನವಿ ಕೊಟ್ಟಿದ್ದೇವೆ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೇಳಿಕೆ ನೀಡಿದ ನಂತರ ಪ್ರತಿಭಟನೆ ಮಾಡುವುದಾಗಿ ನಿರ್ಧಾರ ಮಾಡಿದ್ದೆವು. ಅದಕ್ಕೂ ಮೊದಲು ಆಯೋಗಕ್ಕೆ ದೂರು ನೀಡಿದ್ದೇವೆ. ಬಿಜೆಪಿಯವರು ಗೋವು, ಮಹಿಳೆಗೆ ಜೈ ಅಂತಾರೆ. ಆದರೆ, ಇದೇನಾ ಬಿಜೆಪಿ ಸಂಸ್ಕೃತಿ?. ತಮ್ಮ ಮನೆ ಮಗಳಿಗೂ ಹೀಗೆ ಮಾತನಾಡುತ್ತಾರಾ?.ಇದು ಅಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.
ಸಂಜಯ್ ಪಾಟೀಲ್ ನಾಲಿಗೆ ಹರಿ ಬಿಟ್ಟಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಶೋಭಾ ಕರಂದ್ಲಾಜೆಗೆ ಎಲ್ಲಿ ಹೋಗಿದ್ದಾರೆ ಈಗ?. ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲೂ ಗೌರವಿಸುತ್ತಾರೆ. ಆದರೆ, ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ. ಸಂಜಯ್ ಪಾಟೀಲ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದೂರು ಸ್ವೀಕರಿಸಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಈ ಬಗ್ಗೆ ಪರಿಶೀಲನೆ ಮಾಡಿ ವರದಿ ತರಿಸಿಕೊಳ್ಳುತ್ತೇನೆ. ಮಹಿಳಾ ಆಯೋಗ ಮಹಿಳೆಯರಿಗಾಗಿಯೇ ಇರುವುದು. ಆಯೋಗದ ವ್ಯಾಪ್ತಿಯಲ್ಲಿ ಏನು ಕ್ರಮ ಕೈಗೊಳ್ಳಬೇಕು ಅದನ್ನ ಮಾಡುತ್ತೇವೆ. ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡುವುದು ಕಾನೂನು ಬಾಹಿರ. ಈ ಸಂಬಂಧ ಆಯೋಗದ ವ್ಯಾಪ್ತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಓದಿ:ಪ್ರೌಢಶಾಲೆ ಹಂತದಲ್ಲೇ ‘Technology School': ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ