ಬೆಂಗಳೂರು:ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ನಾಡಿನ ಗೌರವಕ್ಕೆ ಅತ್ಯಂತ ಕಳಂಕ ಹಾಗೂ ಕರಾಳ ದಿನ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ವಿಧಾನಸೌಧಲ್ಲಿ ಮಾತನಾಡಿದ ಅವರು, ಕರ್ನಾಟಕದ ರಾಜಕೀಯ ವಿದ್ಯಮಾನ ಯಾರಿಗೂ ಗೌರವ ತರುವುದಿಲ್ಲ. ಬಹಳ ಅನಾಗರಿಕ, ಅಗೌರವ ತರುತ್ತದೆ. ಈ ಘಟನೆಗೆ ಸಿಎಂ ಮೇಲೆ ಹೊರೆ ಹೊರಿಸುತ್ತಿಲ್ಲ. ಸಿಎಂಗೆ ಇಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಇಂತಹ ಘಟನೆಗಳಿಂದ ಅವರಿಗೆ ಒಳ್ಳೆಯ ಹೆಸರು ಬರುವುದಿಲ್ಲ, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಕಾರ್ಯಾಲಯವನ್ನು ಸಿದ್ದರಾಮಯ್ಯ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ ಎಂದರೆ ನಾವು ಅದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ನೋಡೇ ಬಿಡ್ತೇವೆ ಎಂಬ ಮಾಜಿ ಸ್ಪೀಕರ್ ಬೋಪಯ್ಯ ಹೇಳಿಕೆ ವಿಚಾರವಾಗಿ ಕಿಡಿಕಾರಿದ ವಾಟಾಳ್, ಮುತ್ತಿಗೆ ಹಾಕಲು ಹೊರಟಿರುವುದು ಎಸ್ಪಿ ಕಚೇರಿಗೆ. ಅದು ಬೋಪಯ್ಯ ಅವರ ಕಾರ್ಯಾಲಯ, ಮನೆ ಅಲ್ಲ. ಆದರೆ ಬೋಪಯ್ಯರ ಧೋರಣೆ ಸಂವಿಧಾನಕ್ಕೆ ಮಾಡಿದ ಅಪಪ್ರಚಾರವಾಗಿದೆ. ಅವರು ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದರು.
ವಾಟಾಳ್ ನಾಗರಾಜ್ ಪ್ರತಿಕ್ರಿಯೆ ಟಿಪ್ಪು ಸುಲ್ತಾನ್ ಮಹಾನ್ ಹೋರಾಟಗಾರ: ಕರ್ನಾಟಕದಲ್ಲಿ ಕೋಳಿ ಮೊಟ್ಟೆ ಸಂಸ್ಕೃತಿ ಇರಬಾರದು. ಪ್ರತಿಪಕ್ಷ ನಾಯಕರು ಅಂದರೆ ಸಿಎಂ ಇದ್ದ ಹಾಗೆ. ಟಿಪ್ಪು ಸುಲ್ತಾನ್ ಈ ದೇಶದ ಮಹಾನ್ ಹೋರಾಟಗಾರ, ಮಹಾಪುರುಷ. ಬ್ರಿಟಿಷರ ವಿರುದ್ಧದ ಅವರ ಹೋರಾಟ ಅದ್ಭುತ. ಮಹಾತ್ಮ ಗಾಂಧಿ ದೇಶಕ್ಕೆ ದೇವರಿದ್ದಂತೆ, ಆದರೆ ಎಲ್ಲೆಂದರಲ್ಲಿ ಸಾವರ್ಕರ್ ಫೋಟೋ ಹಾಕುವ ಮೂಲಕ ಬಿಜೆಪಿ ಜಗಳಕ್ಕೆ ಬರುತ್ತಿದೆ. ನಾಥೂ ರಾಂ ಗೋಡ್ಸೆ ಫೋಟೋವನ್ನು ಎಲ್ಲ ಕಡೆ ಹಾಕಿ ಕಾನೂನನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಗೋಡ್ಸೆ ಫೋಟೋ ಎಲ್ಲಿಗೂ ತರಬಾರದು ಎಂದು ಆಗ್ರಹಿಸಿದರು.
ಕೋಳಿ ಮೊಟ್ಟೆ ರಾಜಕೀಯ ನಿಲ್ಲಬೇಕು. ಇಲ್ಲವಾದರೆ ಕನ್ನಡ ಪರ ಸಂಘಟನೆಯು ಹೋರಾಟ ಮಾಡಲಿದೆ. ಮುಂದಿನ ವಾರ ಈ ಸಂಬಂಧ ಸಭೆ ಕರೆದು ತೀರ್ಮಾನಿಸಲಾಗುವುದು. ಪ್ರಜಾಪ್ರಭುತ್ವಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ. ಕಡಿವಾಣ ಹಾಕುವಂತೆ ಸಿಎಂರಲ್ಲಿ ಒತ್ತಾಯ ಮಾಡುತ್ತೇನೆ ಎಂದರು.
ಮೊಟ್ಟೆ ಎಸೆದಿರುವುದು ಖಂಡಿಸುತ್ತೇನೆ:ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ನಾನು ಖಂಡಿಸುತ್ತೇನೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ವಿಧಾನಸೌಧಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಘಟನೆ ನಡೆಯಬಾರದಿತ್ತು. ಅವರು ವಿಪಕ್ಷ ನಾಯಕರಾಗಿ, ಮಾಜಿ ಸಿಎಂ ಆಗಿ ಕೆಲಸ ಮಾಡಿದವರು. ಮೊಟ್ಟೆ ಎಸೆಯುವ ಅವಶ್ಯಕತೆ ಇಲ್ಲ. ಏನೇ ಆದರೂ ನಾವೆಲ್ಲ ಮನುಷ್ಯರು, ಯಾವುದೇ ಪಕ್ಷದವರಾದರೂ ಹೀಗೆ ಮಾಡಬಾರದು. ಅವರವರ ಹುದ್ದೆ ಅದರದೇ ಗೌರವ ಇದೆ ಎಂದು ತಿಳಿಸಿದರು.
ಇದೇ ವೇಳೆ ಬಿಬಿಎಂಪಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಅದನ್ನ ಸಾಮ್ರಾಟ್ ಅವರನ್ನೇ ಕೇಳಿಕೊಳ್ಳಿ ಎಂದು ಸೂಚ್ಯವಾಗಿ ಹೇಳಿದರು.