ಬೆಂಗಳೂರು :ಮೇಕೆದಾಟು ಯೋಜನೆ ಜಾರಿ ಕುರಿತು ಕಾಂಗ್ರೆಸ್ ಪಾದಯಾತ್ರೆಗೆ ವಿರೋಧವಿಲ್ಲ. ಆದರೆ, 6 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಜನೆಯನ್ನ ಜಾರಿ ಯಾಕೆ ಮಾಡಲಿಲ್ಲ. ಇಂದು ಸಂಗಮದಿಂದ ಪಾದಯಾತ್ರೆ ಆರಂಭ ಮಾಡಿದ್ದಾರೆ.
ಆದರೆ, ನಾವು 2006ರಲ್ಲಿ ಮೇಕೆದಾಟು ಜಾಗಕ್ಕೆ ಹೋಗಿ ಶಂಕುಸ್ಥಾಪನೆ ಮಾಡಿ ಬಂದಿದ್ದೇವೆ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಇದೇ 19ರಂದು ತಮಿಳುನಾಡು ಗಡಿ ಬಂದ್ ಮಾಡುತ್ತೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆ.. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವ ತಮಿಳುನಾಡು ವಿರುದ್ಧ ಭಾನುವಾರದಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ವಿರೋಧ ಮಾಡುತ್ತಿರುವುದು ಅತ್ಯಂತ ಹೀನಾಯ ಹಾಗೂ ಬೇಜವಾಬ್ದಾರಿತನವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಶಿಲಾನ್ಯಾಸ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ವಿಧಾನಸಭೆಯೊಳಗೆ ಹಾಗೂ ಹೊರಗೆ ಎಲ್ಲಾ ವಿರೋಧ ಪಕ್ಷದ ನಿಯೋಗ ದೆಹಲಿಗೆ ಹೋಗಬೇಕು. ಪ್ರಧಾನಮಂತ್ರಿಯವರನ್ನು ಭೇಟಿ ಮಾಡಬೇಕು. ಕರ್ನಾಟಕದ ಲೋಕಸಭಾ ಸದಸ್ಯರು ಪ್ರಧಾನಮಂತ್ರಿಯವರ ಮೇಲೆ ತೀವ್ರ ಒತ್ತಡ ತರಬೇಕು ಎಂದು ಅಭಿಪ್ರಾಯಪಟ್ಟರು.