ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಜೋರಾಗಿದೆ. ಆದ್ದರಿಂದ ರಾಜ್ಯದಲ್ಲಿ SSLC ಪರೀಕ್ಷೆ ನಡೆಸದೆ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಮುಖ್ಯಮಂತ್ರಿಗಳು,ಮಂತ್ರಿಗಳು,ಅಧಿಕಾರಿಗಳು ಆರಾಮಾಗಿರಬೇಕು. ಎಸ್ಎಸ್ಎಲ್ಸಿ ಮಕ್ಕಳು ಬಾವಿಗೆ ಬೀಳಬೇಕೇ?ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗುರುವಾರದಿಂದ ನಡೆಯಲಿರುವ SSLC ಪರೀಕ್ಷೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ನಾಡಿನ 8 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷೆ ಬರೆಯಲು ಬೀದಿಗಿಳಿಸುವುದು ದೊಡ್ಡ ಗಂಡಾಂತರಕ್ಕೆ ಕಾರಣವಾಗಲಿದೆ. ಆ ಮಕ್ಕಳನ್ನು ಬೀದಿಗಿಳಿಸುತ್ತಿರುವ ಸರ್ಕಾರ ತಾನು ಮಾತ್ರ ಸುರಕ್ಷಿತವಾಗಿರಲು ಬಯಸುತ್ತಿರುವುದೇಕೆ? ತಕ್ಷಣ ವಿಧಾನಮಂಡಲ ಅಧಿವೇಶನ ಕರೆದು ಇವರು ಉಭಯ ಸದನಗಳ ಎಲ್ಲ ಶಾಸಕರು ಪಾಲ್ಗೊಳ್ಳುವಂತೆ ಮಾಡಲಿ ಎಂದು ಸವಾಲೆಸೆದಿದ್ದಾರೆ.
ಕೊರೊನಾ ಸೋಂಕಿನಿಂದ ರಾಜಧಾನಿ ಬೆಂಗಳೂರು ತಲ್ಲಣಿಸಿದೆ. ಲಾಕ್ಡೌನ್,ಸೀಲ್ಡೌನ್ಗಳ ಹೊಡೆತಕ್ಕೆ ಮುದುರಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಪರೀಕ್ಷೆ ಬರೆಯಬೇಕು ಎನ್ನುವುದು ಅಮಾನವೀಯ. ಹೀಗಾಗಿ ಈ ವರ್ಷ ಪರೀಕ್ಷೆ ರದ್ದು ಮಾಡಿ, ಮಕ್ಕಳನ್ನು ತೇರ್ಗಡೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು. ರಾಜ್ಯದ ಯಾವ ಜಿಲ್ಲೆ ಆತಂಕದಿಂದ ಮುಕ್ತವಾಗಿದೆ?ಎಂದು ಪ್ರಶ್ನಿಸಿದ ಅವರು, ಯಾವ ಕಾರಣಕ್ಕೂ ಪರೀಕ್ಷೆ ಬೇಡ, ಹಾಗೊಂದು ವೇಳೆ ಪರೀಕ್ಷೆ ನಡೆಸಿ ಹೆಚ್ಚು ಕಡಿಮೆಯಾದ್ರೆ ಅದರ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.