ಬೆಂಗಳೂರು:ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಡಿಸೆಂಬರ್ 5ರಂದು ರಾಜ್ಯ ಬಂದ್ ವಿಚಾರದಲ್ಲಿ ವ್ಯಾಪಕ ಪರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಎಲ್ಲಾ ಸಂಘಟನೆ ಒಂದುಗೂಡಿಸಲು ಮುಂದಾಗಿರುವ ವಾಟಾಳ್, ಸಾರಾ ಗೋವಿಂದ್ ಹಲವು ಸಂಘಟನೆಗಳ ಜೊತೆ ಜಂಟಿ ಸುದ್ದಿಗೋಷ್ಠಿ ಕರೆದಿದ್ದರು.
ಸುದ್ದಿಗೋಷ್ಠಿಯ ನಂತರ ಈಟಿವಿ ಭಾರತದ ಜೊತೆ ಮಾತನ್ನಾಡಿದ ಕನ್ನಡ ಪರ ಹೋರಾಟಗಾರ , ಮಾಜಿ ಶಾಸಕ ವಾಟಾಳ್ ನಾಗರಾಜ್ ಕೆಲವು ಮರಾಠ ಪ್ರಾಧಿಕಾರದ ಬಗ್ಗೆ ಎದ್ದಿರುವ ವಿವಾದ, ಕನ್ನಡ ಪರ ಸಂಘಟನೆಗಳ ಹೋರಾಟ ಹಾಗೂ ಡಿಸೆಂಬರ್ 5 ರಂದು ಕರೆದಿರುವ ಬಂದ್ ನಮ್ಮ ಕೆಲವು ಪ್ರೆಶ್ನೆಗಳಿಗೆ ಉತ್ತರಿಸಿದ್ದಾರೆ.
ಪ್ರತಿಭಟನೆ ಹಾಗೂ ಬಂದ್ ರೂಪು ರೇಷೆಗಳು?
5ನೇ ತಾರಿಕು ಬಂದ್ ಮಾಡುತ್ತಿರುವುದು, ನಾಡಿಗಾಗಿ, ಕನ್ನಡಿಗರಿಗಾಗಿ, ಕರ್ನಾಟಕಕ್ಕಾಗಿ. ಮರಾಠಿ ಪ್ರಾಧಿಕಾರ ಕರ್ನಾಟಕಕ್ಕೆ, ಕನ್ನಡಿಗರಿಗೆ, ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಅಪಾಯಕಾರಿ. ಬೆಳಗಾವಿ, ನಿಪ್ಪಾಣಿ, ಕಾರವಾರ ನಮಗೆ ಸೇರಬೇಕು ಸುಪ್ರೀಮ್ ಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಅದಕ್ಕಾಗಿ ಮುಂದಿನ ದಿನಗಳು ಪ್ರಾಧಿಕಾರ ರಚನೆಯಾದರೆ ಅಪಾಯ ಕಟ್ಟಿಟ್ಟಬುತ್ತಿ, ಯಡಿಯೂರಪ್ಪ ತಡೆಯಲು ಆಗುವುದಿಲ್ಲ, ಅವರು ಚಿಂತನೆ ಮಾಡಬೇಕು, ಕಾಲ ಮಿಂಚಿಲ್ಲ 5ನೇ ತಾರೀಕು ಬಂದ್ ಇರೋದು, ಈ ಒಂದು ಪ್ರಾಧಿಕಾರ ರಚನೆಯನ್ನು ಕೈ ಬಿಡಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ.
ಯಡಿಯೂರಪ್ಪ ಚುನಾವಣೆಗೋಸ್ಕರ ಮರಾಠಿಗರು ಮತ್ತು ಕನ್ನಡಿಗರ ನಡುವೆ ಒಡಕು ಮೂಡಿಸುತ್ತಿದ್ದಾರೆ: ವಾಟಾಳ್ ನಾಗರಾಜ್
ಮರಾಠಿ ಪ್ರಾಧಿಕಾರ ಕರ್ನಾಟಕಕ್ಕೆ, ಕನ್ನಡಿಗರಿಗೆ, ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಲಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ ನಮಗೆ ಸೇರಬೇಕು ಸುಪ್ರೀಮ್ ಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಅದಕ್ಕಾಗಿ ಮುಂದಿನ ದಿನಗಳು ಪ್ರಾಧಿಕಾರ ರಚನೆಯಾದರೆ ಅಪಾಯ ಕಟ್ಟಿಟ್ಟಬುತ್ತಿ, ಯಡಿಯೂರಪ್ಪ ತಡೆಯಲು ಆಗುವುದಿಲ್ಲ, ಯಡಿಯೂರಪ್ಪ ಚಿಂತನೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
5ನೇ ತಾರೀಕು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್, ಟೌನ್ ಹಾಲ್ ನಿಂದ ಬೆಳಗ್ಗೆ 10.30 ಗಂಟೆಗೆ ಭಾರಿ ಮೆರವಣಿಗೆ, ನಾಳೆ ಅತ್ತಿಬೆಲೆ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ್, ಕೆ ಅರ್ ಪುರಂ ಹತ್ತಿರ ನವೆಂಬರ್ 28 ರಂದು ರಾಷ್ಟ್ರೀಯ ಹೆದ್ದಾರಿ ಬಂದ್, ಬಿಜಾಪುರದಲ್ಲಿ 1 ನೇ ತಾರಿಕು ಎಲ್ಲಾ ಕನ್ನಡ ಪರ ಸಂಘಟನೆಗಳು ಡಿಸಿ ಕಛೇರಿ ಮುಂದೆ ಪ್ರತಿಭಟನೆ. ಇವತ್ತು ಅನೇಕ ಸಂಘಟನೆಗಳು ಬಂದ್ಗೆ ಸಂಪೂರ್ಣವಾದ ಬೆಂಬಲವನ್ನು ಕೊಟ್ಟಿದ್ದಾರೆ. ವಕೀಲರ ಸಂಘದ ಅಧ್ಯಕ್ಷರು ರಂಗನಾಥ್ ಬಂದ್ಗೆ ಬಹಿರಂಗವಾದ ಬೆಂಬಲ ಕೊಟ್ಟಿದ್ದು, ಅಂದು ವಕೀಲರು ಕೆಲಸ ಮಾಡುವುದಿಲ್ಲ. ಬೀದಿ ವರ್ತಕರು ಸಾಮಾನ್ಯ ಜನ ಬಂದ್ಗೆ ಸಂಪೂರ್ಣವಾದ ಬೆಂಬಲವನ್ನು ಕೊಟ್ಟಿದ್ದಾರೆ.
ಮರಾಠ ಒಕ್ಕೂಟದ ಅಧ್ಯಕ್ಷ ಗಾಯಕ್ವಾಡ್ ಅವರ 'ನಾವು ಕನ್ನಡಿಗರೆ' ಎಂಬ ಹೇಳಿಕೆಗೆ ಉತ್ತರ.
ಮರಾಠ ಒಕ್ಕೂಟಗಳ ಅಧ್ಯಕ್ಷ ಗಾಯಕ್ವಾಡ್ ಹೇಳೋದು 100 ಕ್ಕೆ 100 ಸತ್ಯ, ಅವರನ್ನು ಬೇರ್ಪಡಿಸುತ್ತಿರುವರು ಯಡಿಯೂರಪ್ಪ, ಚುನಾವಣೆಗೋಸ್ಕರ 50 ಕೋಟಿ ಕೊಡ್ತೀನಿ ಅಂತ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಅವರಿಗೂ ಈ ಪ್ರಾಧಿಕಾರ ಬೇಡ. ಯಾಕೆ ಈ ಪ್ರಾಧಿಕಾರ ಮಾಡಿ ನಮ್ಮ ನಮ್ಮಲ್ಲೇ ಜಗಳ ತಂದಿಡುತ್ತಿದ್ದಾರೆ. ನಾವು ವೈಯಕ್ತಿಕವಾಗಿ ಅವರ ವಿರೋಧಿಗಳಲ್ಲ. ಮರಾಠಿಗರು ಕರ್ನಾಟಕದಲ್ಲಿ ಇದ್ದು, ನಾವು ಅದನ್ನ ಅಲ್ಲಗಳೆಯುವುದಿಲ್ಲ. ಆದರೆ ಪ್ರಾಧಿಕಾರ ಬೇಕಿಲ್ಲ.
ಕರವೇ ನಾರಾಯಣ ಗೌಡ ಬಣ ಹಾಗೂ ಪ್ರವೀಣ್ ಕುಮಾರ್ ಶೆಟ್ಟಿ ಬಂದ್ಗೆ ಬೆಂಬಲ ಕೊಡದಿರುವ ಬಗ್ಗೆ.
ಕರವೇ ನಾರಾಯಣ ಗೌಡರು ನನಗೆ ತುಂಬಾ ಬೇಕಾದವರು. ಅವರ ಹೃದಯದಲ್ಲಿ ವಿರೋಧ ಮಾಡಬೇಕು ಅಂತ ಇಲ್ಲ. ನಾವು ಮತ್ತೆ ಸೇರುತ್ತೇವೆ ಈಗಾಗಲೇ ಅವರ ಜೊತೆಯೂ ಮಾತನ್ನಾಡಿದ್ದು ಅವರು ಬೆಂಬಲ ಕೊಟ್ಟೆ ಕೊಡುತ್ತಾರೆ. ಪ್ರವೀಣ್ ಕುಮಾರ್ ಶೆಟ್ಟಿ ನಮ್ಮ ಒಕ್ಕೂಟದಲ್ಲಿ ಇದ್ದು ಅವರು ಹೊರ ಹೋಗುವುದಿಲ್ಲ ಎಲ್ಲರೂ ನನಗೆ ಬೆಂಬಲ ಕೊಡುತ್ತಾರೆ ನನಗೂ ಅವರಿಗೂ ತುಂಬಾ ಬಾಂಧವ್ಯ ಇದೆ.
ಯತ್ನಾಳ್ ಹೇಳಿಕೆ ಹಾಗೂ ಬಂದ್ಗೆ ವಿಜಯಪುರದಲ್ಲಿ ವಿರೋಧದ ಬಗ್ಗೆ
ಯತ್ನಾಳ್ ಯಾರು? ಯತ್ನಾಳ್ ತರದವರು ಬಿಜೆಪಿಯಲ್ಲಿ ಸಾಕಷ್ಟು ಜನ ಇದ್ದು ಅವರಿಗೆಲ್ಲ ಉತ್ತರ ಕೊಡೋದಕ್ಕೆ ನಾನು ಹೋಗಲ್ಲ. ಬೊಗಳುವವರಿಗೆಲ್ಲ ಉತ್ತರ ಕೊಡೋಕಾಗಲ್ಲ. 50 ವರ್ಷ ಹೋರಾಟ ಮಾಡಿರುವ ನಾನು ಯಾರೋ ಏನೋ ಅಂದರು ಅಂತ ತಲೆಕೆಡಸಿಕೊಳ್ಳುವುದಿಲ್ಲ. ಯತ್ನಾಳ್ಗೆ ಉತ್ತರ ಕೊಡೋದಕ್ಕೆ ಹೋದರೆ ನಾನು ಮೂರ್ಖನಾಗುತ್ತೇನೆ.
ಹೀಗೆ ಜಾತಿಗೊಂದು ಪ್ರಾಧಿಕಾರ ಮಾಡುವುದು ಸರಿಯೇ?
ಬೇರೆ ಪ್ರಾಧಿಕಾರಗಳ ಬಗ್ಗೆ ನಮ್ಮ ಯಾವುದೇ ಆಕ್ಷೇಪಣೆ ಇಲ್ಲ. ನಮ್ಮದು ಸ್ಪಷ್ಟವಾಗಿ ಮರಾಠ ಪ್ರಾಧಿಕಾರದ ವಿರೋಧವಾಗಿದ್ದು, ಈ ರೀತಿ ಪ್ರಾಧಿಕಾರ ರಚನೆ ಮಾಡಿದರೆ, ತಮಿಳರು, ತೆಲುಗರು, ಮಲಯಾಳಿಗಳು, ಗುಜರಾತಿಗಳು, ಮಾರ್ವಾಡಿಗಳು ಎಲ್ಲರೂ ಪ್ರಾಧಿಕಾರ ಕೇಳುತ್ತಾರೆ. ವಿಧಾನಸೌಧ, ವಿಕಾಸಸೌಧ ಎರಡೂ ಕಡೆ ಸುಮಾರು 50 ಪ್ರಾಧಿಕಾರದ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ನೀಡಿ ಕೂರಿಸಬೇಕಾಗುತ್ತೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಯಡಿಯೂರಪ್ಪ ಮತ್ತೊಮ್ಮೆ ಚಿಂತನೆ ಮಾಡಲಿ. ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಮುಖ್ಯಮಂತ್ರಿಯಾದವರು ಸೋಲು ಅಂತ ತಿಳಿದುಕೊಳ್ಳಬಾರದು. ಸಾರ್ವಜನಿಕರ ಅಭಿಪ್ರಾಯ ಕೂಗನ್ನು ಮುಖ್ಯಮಂತ್ರಿಗಳು ಸ್ವಾಗತ ಮಾಡಬೇಕು. ಸ್ವಾಗತ ಮಾಡಿ ತಾವು ಮಾಡಿರುವುದು ಸರೀನಾ ತಪ್ಪಾ ಎಂದು ತೀರ್ಮಾನ ತೆಗೆದುಕೊಂಡು ಒಂದು ತೀರ್ಮಾನಕ್ಕೆ ಬರಬೇಕು. ಹಠ ಮಾಡಬೇಡಿ ಇದನ್ನ ನಾನು ಕೈ ಮುಗಿದು ಕೇಳುತ್ತೇನೆ.
ಸಿಎಂ ಮತ್ತು ಸರ್ಕಾರಕ್ಕೆ ನಿಮ್ಮ ಮನವಿ ಏನು?
ಸಿಎಂಗೆ ನಿಮ್ಮ ಮೂಲಕ ಕಳಕಳಿಯಿಂದ ಮನವಿ ಮಾಡುತ್ತೇನೆ, ಇದನ್ನ ಬೀದಿ ರಂಪಕ್ಕೆ ಬಿಡಬೇಡಿ, ಪುನರ್ ಪರಿಶೀಲನೆ ಮಾಡಿ, ನಾವುಗಳು ಮರಾಠ ಜನಾಂಗವನ್ನು ದ್ವೇಷ ಮಾಡುತ್ತಿಲ್ಲ. ಮರಾಠ ಪ್ರಾಧಿಕಾರ ಬೇಡ. ಈ ಕುರಿತು ಅವರು ತೀರ್ಮಾನ ತೆಗೆದುಕೊಳ್ಳಬೇಕು.