ಕರ್ನಾಟಕ

karnataka

ETV Bharat / state

ಹೋಟೆಲ್​ ತಿಂಡಿ ದರ ಏರಿಕೆ ವಿರೋಧ: 1 ರೂಪಾಯಿಗೆ ರಾಗಿ ಮುದ್ದೆ, ಸಾರು ವಿತರಿಸಿ ವಾಟಾಳ್‌ ಪ್ರತಿಭಟನೆ

ಹೋಟೆಲ್ ದರ ಇಳಿಕೆ ಮಾಡುವವರೆಗೆ ಮುಂದಿನ ದಿನಗಳಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ವಾಟಾಳ್​ ನಾಗರಾಜ್​ ಎಚ್ಚರಿಕೆ ನೀಡಿದ್ದಾರೆ.

Vatal Nagaraj serving Ragiball
ರಾಗಿಮುದ್ದೆ ನೀಡುತ್ತಿರುವ ವಾಟಾಳ್​ ನಾಗರಾಜ್​

By

Published : Aug 4, 2023, 6:41 PM IST

ಹೋಟೆಲ್​ ತಿಂಡಿ ದರ ಏರಿಕೆ ವಿರೋಧಿಸಿ ವಾಟಾಳ್‌ ನಾಗರಾಜ್ ಪ್ರತಿಭಟನೆ

ಬೆಂಗಳೂರು: ಹೋಟೆಲ್​ಗಳಲ್ಲಿ ತಿಂಡಿ-ತಿನಿಸುಗಳ ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ಹೇಳಿದ್ದಾರೆ. ನಗರದ ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ, ಇಂದು ಮಧ್ಯಾಹ್ನ ನಗರದ ಕೆಂಪೇಗೌಡ ಬಸ್‌ ನಿಲ್ದಾಣದ ಬಳಿ 1 ರೂ.ಗೆ ರಾಗಿ ಮುದ್ದೆ, ಸಾರು ನೀಡುವ ಮೂಲಕ ವಿನೂತನ ರೀತಿಯಲ್ಲಿ ಅವರು ಪ್ರತಿಭಟನೆ ಮಾಡಿದರು.

ತಿಂಡಿಗಳ ಬೆಲೆ ಏರಿಕೆ ಅವೈಜ್ಞಾನಿಕ. ಶೇ.60 ರಷ್ಟು ಜನರು ಹೋಟೆಲ್ ತಿಂಡಿಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ, ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಏರಿಸಬಾರದು ಎಂದು ಅವರು ಆಗ್ರಹಿಸಿದರು. ಬೆಲೆ ಇಳಿಕೆ ಮಾಡುವವರೆಗೆ ಮುಂದಿನ ದಿನಗಳಲ್ಲಿ ನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ರಾಗಿ ಮುದ್ದೆಗೆ 50 ರೂಪಾಯಿಯಾಗಿದೆ. ನಾವು 1 ರೂಪಾಯಿಗೆ ಒಂದು ರಾಗಿ ಮುದ್ದೆ ಹಾಗೂ ಸಾಂಬಾರು ಮಾರುವ ಮೂಲಕ ಹೋಟೆಲ್​ಗಳಲ್ಲಿ ತಿಂಡಿಗಳ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದರು.

ಸರ್ಕಾರ ಹಾಲಿನ ದರವನ್ನೂ ಏರಿಕೆ ಮಾಡಿದೆ. ಅದನ್ನೂ ಕೂಡ ಇಳಿಕೆ ಮಾಡಬೇಕು. ಸರ್ಕಾರ ಚಿಂತನೆ ಮಾಡಿ ವೈಜ್ಞಾನಿಕವಾಗಿ ಹೋಟೆಲ್​ಗಳಲ್ಲಿ ತಿಂಡಿ ಹಾಗೂ ಹಾಲಿನ ದರ ಏರಿಕೆ ಮಾಡಿದರೆ ಸಾಮಾನ್ಯ ಜನರಿಗೆ ಹೊರೆಯಾಗುವುದಿಲ್ಲ. ಸರ್ಕಾರ ಇಂದಿರಾ ಕ್ಯಾಂಟೀನ್​ನಲ್ಲಿ ಕಡಿಮೆ ದರಕ್ಕೆ ಆಹಾರ ಒದಗಿಸುತ್ತಿದೆ. ಹೀಗಾಗಿ ಹೊಟೇಲ್​ನವರಿಗೂ ವೈಜ್ಞಾನಿಕವಾಗಿ ಬೆಂಬಲ ಬೆಲೆಯನ್ನು ಕೊಡಬೇಕು ಎಂದು ಕೋರಿದರು.

ತರಕಾರಿ, ಹೋಟೆಲ್ ತಿಂಡಿ-ತಿನಿಸುಗಳು, ಅಡುಗೆ ಎಣ್ಣೆಯ ಬೆಲೆ ಜಾಸ್ತಿಯಾಗುತ್ತಲೇ ಇದೆ. ಇದರಿಂದ ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಮದ್ಯದ ದರ ಜಾಸ್ತಿ ಮಾಡಿ ನಮಗೇ ಅನ್ಯಾಯ ಮಾಡಿದ್ದಾರೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ. ನಮಗಾಗಿಯೂ ಪ್ರತಿಭಟನೆ ಮಾಡಿ ಎಂದು ನನ್ನ ಬಳಿ ಕೇಳಿಕೊಂಡಿದ್ದಾರೆ. ಹೀಗಾಗಿ ಮದ್ಯಪ್ರಿಯರಿಗಾಗಿ ಮುಂದಿನ ವಾರ ಪ್ರತಿಭಟನೆ ಮಾಡುತ್ತೇನೆ ಎಂದು ತಿಳಿಸಿದರು.

ಸರ್ಕಾರಕ್ಕೆ ತಾಕತ್ತಿದ್ದರೆ ಮದ್ಯವನ್ನು ಸಂಪೂರ್ಣ ನಿಷೇಧಿಸಲಿ. ಸ್ವತಃ ಸರ್ಕಾರವೇ ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದೆ. ಈಗ ದರಯೇರಿಕೆ ಮೂಲಕ ಕುಡುಕರಿಗೂ ಸಂಕಷ್ಟ ತಂದೊಡ್ಡಿದೆ ಎಂದು ಕಿಡಿಕಾರಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಇದನ್ನೂ ಓದಿ:ತಾನು ಬೆಳೆದ ಕಬ್ಬಿನ ಫಸಲನ್ನು ಉಚಿತವಾಗಿ ದನಕರುಗಳಿಗೆ ನೀಡಿದ ರೈತ

ABOUT THE AUTHOR

...view details