ಬೆಂಗಳೂರು :ಅಮಿತ್ ಶಾ ಧೋರಣೆ ಎಲ್ಲ ಪ್ರಾದೇಶಿಕ ಭಾಷೆ ತುಳಿಯುವ ಹುನ್ನಾರವಾಗಿದ್ದು,ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ತಿಂಗಳ 15 ರಿಂದ ಹಿಂದಿ ವಿರೋಧಿಸುವ ಚಳವಳಿ ನಡೆಯಲಿದೆ. ಬೆಳಗಾವಿ, ಕೋಲಾರ, ಎಲ್ಲ ಕಡೆ ಚಳವಳಿ ನಡೆಯಲಿದೆ. ಬೆಂಗಳೂರಿನಲ್ಲಿ ಕರಾಳ ದಿನ ಆಚರಣೆ ನಡೆಸಲಿದ್ದೇವೆ. ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಎಲ್ಲರ ಮೇಲೆ ಹೇರುವ ಕೆಲಸ ಮಾಡುತ್ತಿದೆ. ಕೇಂದ್ರ ಗೃಹಮಂತ್ರಿ ಅಮಿತ್ ಶಾ ನೇತೃತ್ವದ ಸಮಿತಿ ರಾಷ್ಟ್ರಪತಿ ಅವರಿಗೆ ವರದಿ ಸಲ್ಲಿಸಿದೆ. ಈ ಸಮಿತಿಯ ವರದಿಯಲ್ಲಿ ಹಿಂದಿ ಬಗ್ಗೆ ವಿಚಾರ ಹೇಳಿದ್ದಾರೆ. ಅಮಿತ್ ಶಾ ಅವರು ಒಕ್ಕೂಟದ ವ್ಯವಸ್ಥೆ ಬಗ್ಗೆ ನಂಬಿಕೆ ಇಡಬೇಕು ಎಂದು ಕಿಡಿ ಕಾರಿದರು.
ಹಿಂದಿ ಒಂದೇ ರಾಷ್ಟ್ರ ಭಾಷೆಯಲ್ಲ: ಹಿಂದಿ ಭಾಷೆ ಒಂದೇ ರಾಷ್ಟ್ರ ಭಾಷೆ ಅಲ್ಲ. ಕನ್ನಡವೂ ಕೂಡ ರಾಷ್ಟ್ರ ಭಾಷೆ. ಪ್ರಾದೇಶಿಕ ಭಾಷೆ ಎಲ್ಲವೂ ರಾಷ್ಟ್ರ ಭಾಷೆ. ಅವರು ಹೇಳಿರೋ ವರದಿ ಅನುಷ್ಠಾನಕ್ಕೆ ಬಂದರೆ ಈ ದೇಶದ ವ್ಯವಸ್ಥೆ ಒಂದು ರೀತಿ ಗಂಭೀರ ಪರಿಸ್ಥಿತಿಗೆ ಬರಲಿದೆ. ತಾಂತ್ರಿಕ ಶಿಕ್ಷಣ ಹಿಂದಿಯಲ್ಲೇ ಇರಬೇಕು. ಅವರ ಮಾತು,ಸಮಿತಿಯ ವರದಿ ನಿಜಕ್ಕೂ ದಬ್ಬಾಳಿಕೆ. ನೀವು ಅದನ್ನು ಪಾಲಿಸಬೇಕು ಅನ್ನೋದು ಖಂಡಿತ ಗೌರವ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದು RSS ಅಜೆಂಡಾ. ಹಿಂದಿ ಒಂದೇ, ಬೇರೆ ಭಾಷೆ ಇಲ್ಲ ಅನ್ನೋದು ಅವರ ಅಭಿಪ್ರಾಯ. ನಾವು ಇದನ್ನು ವಿರೋಧಿಸುತ್ತೇವೆ. ಪ್ರಾದೇಶಿಕ ಭಾಷೆ ಮೇಲೆ ಪಾಳೆಗಾರಿಕೆ ಮಾಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಬಿ ಎಲ್ ಸಂತೋಷ್ ವಿರುದ್ಧ ಕಿಡಿ : ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ಮಹಾತ್ಮಾ ಗಾಂಧಿ ಒಬ್ಬರೇ ಅಲ್ಲ ಎಂಬ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಹೇಳಿಕೆಗೆ ಕಿಡಿಕಾರಿರುವ ಅವರು, ಮಹಾತ್ಮ ಗಾಂಧೀಜಿ ಒಬ್ಬರೇ ಸ್ವಾತಂತ್ರ್ಯ ತಂದಿದ್ದು. ಗಾಂಧೀಜಿ ಹಿಂದೆ ಅನೇಕರು ಇರಬಹುದು, ಆದರೆ ಅದಕ್ಕೆ ಅವರನ್ನು ಮಹಾತ್ಮ ಎಂದು ಕರೆದಿದ್ದು ಎಂದರು.