ಬೆಂಗಳೂರು: ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಒಬ್ಬ ಯುವಕನ ಹತ್ಯೆಯಾಗಿದೆ. ಅದರ ಹೇಳಿಕೆ ಬಗ್ಗೆ ಗೃಹ ಸಚಿವರು ಗುಪ್ತಚರ ಇಲಾಖೆ ವರದಿ ಪಡೆದಿಲ್ಲ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಉರ್ದು ಮಾತನಾಡಲಿಲ್ಲವೆಂದು ಯುವಕನಿಗೆ ಚೂರಿ ಇರಿದಿದ್ದಾರೆ.
ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ರು. ಬಳಿಕ ತಪ್ಪಾಯ್ತು ಅಂತಾ ಹೇಳಿದ್ದಾರೆ. ನಿಮಗೆ ಗೃಹ ಸಚಿವ ಸ್ಥಾನ ಕೊಡಲಾಗಿದೆ, ಯಾಕೆ ಕೊಟ್ಟಿದ್ದಾರೆ ಅನ್ನೋ ಚರ್ಚೆ ಬೇಡ. ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ, ನಿಮಗೂ ಘನತೆ ಬರುತ್ತದೆ. ಗೃಹಸಚಿವ ಸ್ಥಾನಕ್ಕೂ ಮಾನ ಉಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.