ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಂದರ್ಶನ ಬೆಂಗಳೂರು : ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ಮತ್ತು ತಮಿಳುನಾಡಿಗೆ ಸ್ಪಷ್ಟ ಸಂದೇಶ ನೀಡಲು ರಾಜ್ಯ ಸರಕಾರ ತಕ್ಷಣವೇ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕೆಂದು ಕನ್ನಡ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ, ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ನಾಳೆ ಬೆಂಗಳೂರಿನಿಂದ ಕೆಆರ್‌ಎಸ್ ಜಲಾಶಯದತನಕ ವಾಹನಗಳ ಮೆರವಣಿಗೆ ನಡೆಸಿ ಜಲಾಶಯಕ್ಕೆ ಮುತ್ತಿಗೆ ಹಾಕುವ ಪ್ರತಿಭಟನೆಯನ್ನು ವಾಟಾಳ್ ನಾಗರಾಜ್ ಕನ್ನಡ ಸಂಘಟನೆಗಳೊಡಗೂಡಿ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 'ಈಟಿವಿ ಭಾರತ' ಜೊತೆ ಸಂದರ್ಶನದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕನ್ನಡ ಸಂಘಟನೆಗಳ ಹಲವಾರು ಹೋರಾಟಗಳ ನಡುವೆಯೂ ರಾಜ್ಯ ಸರಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿದರು.
ಕೆಆರ್ಎಸ್ಗೆ ಮುತ್ತಿಗೆ:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿದ ವಾಟಾಳ್ ನಾಗರಾಜ್,ಕಾವೇರಿ ಜಲಾಶಯಗಳಲ್ಲಿ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಹೇಗೆ?. ಇದನ್ನು ಮನವರಿಕೆ ಮಾಡಿಕೊಡಲು ನಾಳೆ (ಗುರುವಾರ) ಬೆಳಿಗ್ಗೆ ಬೆಂಗಳೂರಿನಿಂದ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮಾರ್ಗವಾಗಿ ಕನ್ನಡ ಸಂಘಟನೆಗಳ ಒಕ್ಕೂಟದಿಂದ ವಾಹನಗಳ ಮೆರವಣಿಗೆ ನಡೆಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಕೆಆರ್‌ಎಸ್ ಜಲಾಶಯ ತಲುಪಿ ಪ್ರತಿಭಟನಾ ಸಭೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ನೀರು ಬಿಡುಗಡೆ ವಿರೋಧಿಸಿ ಕೆಆರ್‌ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ವಾಟಾಳ್ ತಿಳಿಸಿದರು.
ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗೆ ಆಗ್ರಹ:ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಕರ್ನಾಟಕದ ಕಾವೇರಿ ಜಲಾಶಯಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ ಮಾಹಿತಿ ತಿಳಿದುಕೊಳ್ಳಬೇಕು. ಬಳಿಕ ಕಾವೇರಿ ನೀರು ಬಿಡುಗಡೆ ಬಗ್ಗೆ ಬೇಡಿಕೆ ಸಲ್ಲಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಕೇಂದ್ರ ಸರಕಾರವು ಬರಗಾಲದಂತಹ ಸಂಕಷ್ಟದ ಕಾಲದಲ್ಲಿ ಕಾವೇರಿ ಜಲ ವಿವಾದ ಸಮಸ್ಯೆ ಬಗೆಹರಿಸಲು ಕೇಂದ್ರ ಅಧ್ಯಯನ ತಂಡವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕಳುಹಿಸಬೇಕು. ಈ ತಂಡಗಳು ಕಾವೇರಿ ಜಲಾಶಯಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ನೀರು ಬಿಡುಗಡೆ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ವಾಟಾಳ್ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ಯಮ, ಚಿತ್ರಗುಪ್ತನ ವೇಷ ಧರಿಸಿ ಪ್ರತಿಭಟನೆ; ವರುಣ ಕೃಪೆಗೆ ಕಾವೇರಿ ಮಾತೆಗೆ ಪೂಜೆ