ಬೆಂಗಳೂರು: ಸಚಿವರಾದ ಈಶ್ವರ್ ಖಂಡ್ರೆ ಮತ್ತು ರಹೀಂ ಖಾನ್ ನೇತೃತ್ವದಲ್ಲಿ ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯ ಮಠಾಧೀಶರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಅಭಿನಂದಿಸಿದರು. ಸ್ವಾಮೀಜಿಗಳು ಸಿಎಂ ಭೇಟಿ ಮಾಡುವುದಕ್ಕೂ ಮುನ್ನ ವಿಧಾನಸೌಧಕ್ಕೆ ಆಗಮಿಸಿ ಅಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಇದಾದ ಬಳಿಕ ಸಿಎಂ ನಿವಾಸಕ್ಕೆ ಆಗಮಿಸಿದರು.
ಯಾರ‍್ಯಾರು ಭೇಟಿ:ಬೀದರ್, ಕಲಬುರ್ಗಿ ಜಿಲ್ಲೆಯ ವಿವಿಧ ಮಠಗಳ ಪೀಠಾಧ್ಯಕ್ಷರುಗಳಾದ ಪರಮ ಪೂಜ್ಯಶ್ರೀ ಮ.ನಿ.ಪ್ರ. ಡಾ. ಶಿವಾನಂದ ಮಹಾಸ್ವಾಮೀಜಿ, ವಿರಕ್ತ ಮಠ ಹುಲಸೂರು; ಶ್ರೀ ಜಯಶಾಂತಲಿಂಗ ಮಹಾ ಸ್ವಾಮೀಜಿ, ಹಿರೆ ನಾಗಾವ್; ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ, ಆಣದೂರು; ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ರಾಜೇಶ್ವರ್; ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಗಡಿ ಗೌಡ್ ಗಾವ್; ಶ್ರೀ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಹನಸೂರು; ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಳ್ಳಿಖೇಡ್; ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಡೋಣಗಾವ್; ಶ್ರೀ ಶಿವಾನಂದ ಮಹಾಸ್ವಾಮೀಜಿ, ವಿರಕ್ತ ಮಠ, ಸಾಯಿಗಾವ್; ಗಂಗಾಧರ ಸ್ವಾಮೀಜಿ, ಜವಳಿ; ಶ್ರೀ ಚನ್ನಮಲ್ಲ ಸ್ವಾಮೀಜಿ, ವಿರಕ್ತ ಮಠ ಹುಡಗಿ; ಶ್ರೀ ಮುರುಗೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಿರಶಾಡ್, ಹಾವ್ಗಿ ಲಿಂಗೇಶ್ವರ ಶಿವಾಚಾರ್ಯರು, ಹಲಬರ್ಗಾ; ಶ್ರೀ ಮುರುಗೇಂದ್ರ ಸ್ವಾಮೀಜಿ ಚಾಂಚಾಳ್ ಅವರು ಇಂದು ಸಚಿವರಾದ ಈಶ್ವರ್ ಖಂಡ್ರೆ ಹಾಗೂ ರಹೀಮ್ ಖಾನ್ ಜೊತೆ ಆಗಮಿಸಿ ಸಿಎಂ ಭೇಟಿ ಮಾಡಿದರು.
ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ 2013 ರಿಂದ 18ರ ಪೂರ್ಣಾವಧಿ ಅಧಿಕಾರ ನಡೆಸಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಈಗಲೂ ಕಾಂಗ್ರೆಸ್ ಪಕ್ಷಕ್ಕೆ ಜನ ಪೂರ್ಣ ಬಹುಮತ ನೀಡಿದ್ದು ರಾಜ್ಯದ ಅಭಿವೃದ್ಧಿಗೆ ಅತಿ ಹೆಚ್ಚು ಕೊಡುಗೆ ನೀಡಿ ಎಂದು ಹಾರೈಸಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಿಂದಿನ ಸರ್ಕಾರ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಆದರೆ ಎಲ್ಲವೂ ಈಡೇರಿಲ್ಲ. ಸಿದ್ದರಾಮಯ್ಯ ವಿಶೇಷ ಆಸಕ್ತಿ ವಹಿಸಿ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು. ಪ್ರಸಕ್ತ ಸಾಲಿನ ಬಜೆಟ್ನಲ್ಲಿಯೇ ವಿಶೇಷ ಅನುದಾನ ಘೋಷಿಸಬೇಕು ಎಂದು ಮನವಿ ಮಾಡಿದರು. ಎಲ್ಲರ ಮಾತುಗಳನ್ನು ಆಲಿಸಿದ ಸಿಎಂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ.