ಬೆಂಗಳೂರು :ಈದ್-ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ನಗರದ ನೃಪತುಂಗ ರಸ್ತೆಯ ವೈ.ಎಂ.ಸಿ.ಎ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಸ್ಥಳಗಳಿಂದ ಆಗಮಿಸುವುದರಿಂದ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಲು ಸಂಚಾರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಆನಂದ್ರಾವ್ ವೃತ್ತದ ಕಡೆಯಿಂದ ಬರುವ ವಾಹನ ಸವಾರರು ಕೆ ಆರ್ ವೃತ್ತದ ಬಳಿ ಎಡ ತಿರುವು ಪಡೆದು ಡಾ ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ಬಾಳೇಕುಂದ್ರಿ ವೃತ್ತದ, ಕ್ವೀನ್ಸ್ ರಸ್ತೆ ಮೂಲಕ ಸಂಚರಿಸಬಹುದು. ಬಾಳೇಕುಂದ್ರಿ ವೃತ್ತದಿಂದ ಸಿಟಿ ಮಾರ್ಕೆಟ್ ಕಡೆಗೆ ತೆರಳುವ ವಾಹನ ಸವಾರರು ಕೀನ್ಸ್ ರಸ್ತೆ ಸಿದ್ದಲಿಂಗಯ್ಯ ವೃತ್ತದ ಮೂಲಕ ತೆರಳಬಹುದು.
ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲಿ ನಾಯಂಡಹಳ್ಳಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ನಾಗರಭಾವಿ ರಿಂಗ್ ರಸ್ತೆಯ ಮೂಲಕ ಸಂಚರಿಸಿ ಮತ್ತು ಚಂದ್ರಲೇಔಟ್, ವಿಜಯನಗರ ಮಾರ್ಗವಾಗಿ ಸಂಚರಿಸಬಹುದಾಗಿದೆ. ಕಿಂಕೋ ಜಂಕ್ಷನ್ನಲ್ಲಿ ಎಡತಿರುವು ಪಡೆದು ವಿಜಯನಗರ ಮೂಲಕ ಹಾಗೂ ವಿಜಯನಗರ ಕಡೆಯಿಂದ ಬರುವ ವಾಹನಗಳು ಮೈಸೂರು ಕಡೆಗೆ ಚಲಿಸಲು ಚಂದ್ರಲೇಔಟ್ನಿಂದ ಬಲ ತಿರುವು ಪಡೆದು ನಾಗರಬಾವಿ ವೃತ್ತ ಹಾಗೂ ರಿಂಗ್ ರಸ್ತೆ ಮುಖಾಂತರ ಕೆಂಗೇರಿ ಉಪನಗರ ಮಾರ್ಗವಾಗಿ ತೆರಳಬಹುದು. ಹಾಗೆಯೇ ಟೌನ್ಹಾಲ್ ಕಡೆಗೆ ಸಂಚಾರ ದಟ್ಟಣೆಯಾಗಿದ್ದಲ್ಲಿ ಬಸಪ್ಪ ವೃತ್ತದ ಕಡೆಗೆ ಬಲತಿರುವು ನೀಡಿ ಅಥವಾ ಅವೆನ್ಯೂ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲು ಸಂಚಾರಿ ಠಾಣಾ ಪೊಲೀಸರು ಸೂಚಿಸಿದ್ದಾರೆ.