ಕರ್ನಾಟಕ

karnataka

ETV Bharat / state

ಎಂಟು ವರ್ಷದಲ್ಲೇ ಜಲಸಂಪನ್ಮೂಲ ಇಲಾಖೆಗೆ ಕನಿಷ್ಠ ಅನುದಾನ ಹಂಚಿಕೆ! - less grant to Department of Water Resources

ರಾಜ್ಯ ಬಜೆಟ್​ನ ಅನುದಾನ ಹಂಚಿಕೆಯಲ್ಲಿ ಜಲಸಂಪನ್ಮೂಲ ಇಲಾಖೆಗೆ ಸಾಕಷ್ಟು ಆದ್ಯತೆ ಸಿಗಲಿದೆ. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ಅನುದಾನ ಪಡೆಯುತ್ತಿದ್ದ ಜಲಸಂಪನ್ಮೂಲ ಇಲಾಖೆಗೆ ಈಗ ಶೇ. 50ರಷ್ಟು ಅನುದಾನ ಖೋತಾ ಆಗಿದೆ ಎನ್ನಲಾಗಿದೆ.

siddaramaih,kumaraswamy. H D Kumaraswamy
ಸಿದ್ದರಾಮಯ್ಯ,ಯಡಿಯೂರಪ್ಪ.ಹೆಚ್​ಡಿಕೆ

By

Published : Nov 25, 2020, 6:19 PM IST

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ಅನುದಾನ ಪಡೆಯುತ್ತಿದ್ದ ಜಲಸಂಪನ್ಮೂಲ ಇಲಾಖೆಗೆ ಈಗ ಶೇ. 50 ರಷ್ಟು ಅನುದಾನ ಖೋತಾ ಆಗಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಕನಿಷ್ಠ ಅನುದಾನವನ್ನು ಈ ಬಾರಿ ಯಡಿಯೂರಪ್ಪ ಸರ್ಕಾರ ನೀಡಿದೆ.

ರಾಜ್ಯ ಬಜೆಟ್​ನ ಅನುದಾನ ಹಂಚಿಕೆಯಲ್ಲಿ ಜಲಸಂಪನ್ಮೂಲ ಇಲಾಖೆಗೆ ಸಾಕಷ್ಟು ಆದ್ಯತೆ ಸಿಗಲಿದೆ. ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆಗಳಿಗನುಗುಣವಾಗಿ ಅನುದಾನವನ್ನು ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ಸಿದ್ದರಾಮಯ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಹಂಚಿಕೆ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ ಎನ್ನಲಾಗಿದೆ.

ಮೂರು ವರ್ಷದ ಅಂಕಿ-ಅಂಶ

*2018-19 ರಲ್ಲಿ ಜಲಸಂಪನ್ಮೂಲ ಇಲಾಖೆಗೆ 5,166.26 ಕೋಟಿ ಅನುದಾನ ಹಂಚಿಕೆ ಮಾಡಿದ್ದು, 5,079.83 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

*2019-20ರಲ್ಲಿ 5,836.51 ಕೋಟಿ ಅನುದಾನ ಹಂಚಿಕೆ ಮಾಡಿದ್ದು, 5,621.71 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

*2020-21ರಲ್ಲಿ 4,679.37 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿದ್ದು, ನೂರರಿಂದ ಇನ್ನೂರು ಕೋಟಿ ರೂ. ಕಡಿತ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

2013-14ರಲ್ಲಿ ಐದು ವರ್ಷಕ್ಕೆ 50 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದ ಸಿದ್ದರಾಮಯ್ಯ, ಐದು ವರ್ಷಗಳ ಅವಧಿಯಲ್ಲಿ 58,393 ಕೋಟಿ ಅನುದಾನ ಒದಗಿಸಿದ್ದರು. ತಮ್ಮ ಆಡಳಿತಾವಧಿಯಲ್ಲಿ ಪ್ರತಿ ವರ್ಷವೂ 10 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಒದಗಿಸುತ್ತಲೇ ಬಂದಿದ್ದು, ಕಡೆಯ ಬಜೆಟ್​​ನಲ್ಲಿ 2018-19ನೇ ಸಾಲಿಗೆ 15,998 ಕೋಟಿ ರೂ.ಗಳನ್ನು ಬಜೆಟ್​​ನಲ್ಲಿ ಒದಗಿಸಿದ್ದರು.

ಆದರೆ ನಂತರ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಯೋಜನೆಗಳನ್ನು ಮುಂದುವರೆಸಿದರಾದರೂ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗಿ ಜಲಸಂಪನ್ಮೂಲ ಇಲಾಖೆಗೆ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಯಿತು. ಆದರೂ ಕುಮಾರಸ್ವಾಮಿ 2019-20ನೇ ಸಾಲಿಗೆ 17,212 ಕೋಟಿ ಅನುದಾನ ಘೋಷಣೆ ಮಾಡಿದ್ದರಾದರೂ ಮೈತ್ರಿ ಸರ್ಕಾರ ಪತನಗೊಂಡ ಹಿನ್ನೆಲೆ ನಂತರ ಬಂದ ಯಡಿಯೂರಪ್ಪ ಸರ್ಕಾರ ಅನುದಾನ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದರಿಂದ ಜಲಸಂಪನ್ಮೂಲ ಇಲಾಖೆಗೆ ನಿರೀಕ್ಷಿತ ಅನುದಾನ ಸಿಕ್ಕದಂತಾಯಿತು.

ಒಟ್ಟಿನಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಸಾಕಾರಕ್ಕಾಗಿ ಹೆಚ್ಚು ಹೆಚ್ಚು ಅನುದಾನದ ನಿರೀಕ್ಷೆಯಲ್ಲಿದ್ದ ಜಲಸಂಪನ್ಮೂಲ ಇಲಾಖೆಗೆ ಅನುದಾನದ ಕೊರತೆ ಎದುರಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೊದಲ ವರ್ಷದಲ್ಲಿ ರಾಜ್ಯದಲ್ಲಿ ಭೀಕರ ಜಲ ಪ್ರವಾಹ, ನೆರೆಹಾನಿ ಎದುರಾದರೆ, ಎರಡನೇ ವರ್ಷ ಕೊರೊನಾದ ಅಬ್ಬರಕ್ಕೆ ಅನುದಾನ ಕೈ ತಪ್ಪುವಂತಾಗಿದೆ. ಅನುದಾನದ ಕೊರತೆಯಿಂದ ಯೋಜನೆಗಳ ವೆಚ್ಚ ಮತ್ತಷ್ಟು ಹೆಚ್ಚಲಿದ್ದು, ಅನುಷ್ಠಾನವೂ ವಿಳಂಬವಾಗುವ ಆತಂಕ ಎದುರಾಗಿದೆ.

ABOUT THE AUTHOR

...view details