ಬೆಂಗಳೂರು:ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಇಂದು ಸಂಜೆ ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ. ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986ನೇ ಸಾಲಿನ ತಂಡದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಿದ್ದಾರೆ.
ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ. ಅಂತೆಯೇ, ರಾಜ್ಯ ಸರ್ಕಾರದ 39ನೇ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.
ಮಹಿಳೆಯರ ದರ್ಬಾರ್: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ, 2006ನೇ ಇಸವಿಯಲ್ಲಿ ಮಾಲತಿ ದಾಸ್ ಹಾಗೂ 2017ನೇ ಇಸವಿಯಲ್ಲಿ ಕೆ. ರತ್ನಪ್ರಭ ಅವರೂ ಅಲಂಕರಿಸಿದ್ದರು. ಕೆ. ರತ್ನಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್ ರಾಜು ಅಲಂಕರಿಸಿದಾಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ ಎಂಬುದು ಗಮನಾರ್ಹ ಅಂಶವಾಗಿತ್ತು. ಇದೀಗ ವಂದಿತಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ.