ಬೆಂಗಳೂರು:ಶೀಘ್ರದಲ್ಲೇ ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದ್ದು, ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಈಗ ಅದೇ ಮಾದರಿಯಲ್ಲಿ ಬೆಂಗಳೂರಿನಿಂದ ವಾಣಿಜ್ಯ ನಗರಿ ಮುಂಬೈಗೆ ಮತ್ತು ಮುತ್ತಿನ ನಗರಿ ಹೈದರಾಬಾದ್ಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ ಎಂದು ವಿವರಿಸಿದರು.
ಈ ಸಂಬಂಧ ಕೇಂದ್ರ ರೈಲ್ವೇ ಸಚಿವರು ಮತ್ತು ರೈಲ್ವೇ ಕಾರ್ಯದರ್ಶಿಗಳಿಗೆ ರಾಜ್ಯ ಸರ್ಕಾರ ಪತ್ರ ಬರೆದಿದ್ದು, ವಂದೇ ಭಾರತ್ ರೈಲನ್ನು ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಹೈದರಾಬಾದ್ ನಡುವೆ ಸಂಚಾರಕ್ಕೆ ಬಿಡಲು ಉತ್ಸುಕತೆ ತೋರಿದ್ದಾರೆ. ಬೆಂಗಳೂರಿನಿಂದ ವಾಣಿಜ್ಯ ನಗರಿ ಮುಂಬೈ ಮತ್ತು ಬೆಂಗಳೂರಿನಿಂದ ಮುತ್ತಿನ ನಗರಿ ಹೈದರಾಬಾದ್ಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದರೆ ರಾಜ್ಯದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ಎರಡು ತಿಂಗಳಲ್ಲಿ ಒಂದು ಲಕ್ಷ ಮನೆ: ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 1 ಲಕ್ಷ ಮನೆಗಳನ್ನು ಜನರಿಗೆ ಒದಗಿಸಲಾಗುವುದು. ಕಾಯಕ ಯೋಗಿ ಮತ್ತು ನೆಮ್ಮದಿಯ ನೆಲೆ, ಅಭಿವೃದ್ಧಿಯ ಬಲೆ ಪುಸ್ತಕಗಳನ್ನು ಬಿಡುಗಡೆ ಮಾಡಿದರಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮ ಇಲಾಖೆಯ ವತಿಯಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜೀವ್ ಗಾಂಧಿ ವಸತಿ ನಿಗಮದಡಿ ಐದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಜನರಿಗೆ ಮಂಜೂರು ಮಾಡಿದ್ದು, ಈ ಪೈಕಿ ಮೂರೂವರೆ ಲಕ್ಷ ಮನೆಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದ ಸಚಿವರು, ಇನ್ನೂ ಒಂದು ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದ್ದು ಇನ್ನೆರಡು ತಿಂಗಳಲ್ಲಿ ಜನರಿಗೆ ವಿತರಣೆಯಾಗಲಿದೆ ಎಂದರು.
ಉಳಿದಂತೆ ಎರಡು ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿದ್ದು, ಒಟ್ಟು ಏಳು ಲಕ್ಷ ಮನೆಗಳನ್ನು ಜನರಿಗೆ ನೀಡಿದಂತಾಗಲಿದೆ. ಇದೇ ರೀತಿ ಆರ್ಥಿಕ ದುರ್ಬಲ ವರ್ಗದವರಿಗೆ ನೀಡಲಾಗುತ್ತಿರುವ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಬಹುತೇಕ ಪೂರ್ಣಗೊಳ್ಳುತ್ತಾ ಬಂದಿದ್ದು, ಅದಾಗಲೇ ಮನೆಗಳ ವಿತರಣೆ ಕಾರ್ಯ ಆರಂಭವಾಗಿದೆ.
ನಾವು ಅಧಿಕಾರಕ್ಕೆ ಬಂದಾಗ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಆದರೆ ನಾವು ಬಂದ ನಂತರ ಈ ಯೋಜನೆಗೆ ಚಾಲನೆ ನೀಡಿದ್ದಲ್ಲದೆ ಇದನ್ನು ಪೂರ್ಣಗೊಳಿಸುವ ಹಂತಕ್ಕೆ ತಂದಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಸತಿ ಕ್ರಾಂತಿ ಮಾಡಲಾಗಿದೆ ಎಂದು ಬಣ್ಣಿಸಿದ ಅವರು, ಬೆಂಗಳೂರು ಹೊರತು ಪಡಿಸಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಆರು ಸಾವಿರ ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ವಿತರಿಸಲಾಗಿದೆ. ಈ ಮಧ್ಯೆ ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಆಸ್ತಿ ಹಂಚಿಕೆ ಪತ್ರ ನೀಡಲಾಗಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ಎರಡು ಸಾವಿರ ರೂಪಾಯಿಗಳಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿ ಈ ಹಕ್ಕು ಪತ್ರ ಮಾಡಿಕೊಡಲಾಗಿದೆ. ಈ ಪೈಕಿ 1.15 ಲಕ್ಷ ಜನರಿಗೆ ಈಗಾಗಲೇ ನೋಂದಣಿ ಮಾಡಿಸಿಕೊಡಲಾಗಿದ್ದು, ಉಳಿದ ಆಸ್ತಿಗಳನ್ನು ಸದ್ಯದಲ್ಲೇ ನೋಂದಣಿ ಮಾಡಿಸಿಕೊಡುವುದಾಗಿ ತಿಳಿಸಿದರು.