ಬೆಂಗಳೂರು:ವಂದೇ ಭಾರತ್ ಮಾದರಿಯಲ್ಲಿ ವಂದೇ ಮೆಟ್ರೋ ಕೂಡ ರಾಜ್ಯಕ್ಕೆ ಬರಲಿದೆ. ಈ ಸಾಲಿನಲ್ಲಿ ರಾಜ್ಯದ ಕೆಲವು ಡಿವಿಜನ್ಗಳು ಮೂರು ಹಳಿಗಳ ಸೌಕರ್ಯ ಪಡೆಯಲಿದೆ. ದೇಶದ ಇತರೆ ರಾಜ್ಯಕ್ಕೆ ಹೋಲಿಸಿಕೊಂಡರೆ ರೈಲ್ವೇ ಕ್ಷೇತ್ರದಲ್ಲಿ ಕರ್ನಾಟಕ ಅತ್ಯುನ್ನತ ಪ್ರಗತಿ ಸಾಧಿಸಿದೆ, ಸಾಧಿಸುತ್ತಿದೆ, ಸಾಧಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಆಶ್ವಾಸನೆ ನೀಡಿದರು. ಕೇಂದ್ರ ಬಜೆಟ್ ಸಂಬಂಧ ಕರ್ನಾಟಕದ ವಿವಿಧ ಡಿವಿಜನ್ ರೈಲ್ವೇ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ಶುಕ್ರವಾರ ಮಂಡಳಿಯ ಬೆಂಗಳೂರು ಕಚೇರಿಯಲ್ಲಿ ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಮಯದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಜೊತೆಗೆ ವಿಡಿಯೋ ಸಂವಾದ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಬಜೆಟ್ನಲ್ಲಿ ಕರ್ನಾಟಕಕ್ಕೆ ರೈಲ್ವೇ ಸಂಬಂಧ ನೀಡಲಾದ ಅನುದಾನದ ಬಗ್ಗೆ ಮಾಹಿತಿ ನೀಡಿದರು. ಮೋದಿ ಬಜೆಟ್ನಲ್ಲಿ ಕರ್ನಾಟಕಕ್ಕೆ ರೈಲ್ವೇ ಅಭಿವೃದ್ಧಿಗೆ 7,561 ಕೋಟಿ ಕೊಟ್ಟಿದ್ದಾರೆ. 2009 ರಿಂದ 2014ರ ಅವಧಿಯಲ್ಲಿ ನೀಡಿದ್ದಕ್ಕೆ ಹೋಲಿಸಿಕೊಂಡರೆ ಇದು 9% ದಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದ ಮಾದರಿಯಲ್ಲಿ ಯಶವಂತಪುರ, ಬೆಂಗಳೂರು ದಂಡು ರೈಲ್ವೇ ನಿಲ್ದಾಣ ಸೇರಿದಂತೆ ಹಲವು ನಿಲ್ದಾಣಗಳನ್ನು ಹೈಟೆಕ್ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪ್ರಮುಖ ರೈಲ್ವೇ ನಿಲ್ದಾಣಗಳು ಮಾರ್ಪಾಡಾಗಲಿದೆ ಎಂದು ಹೇಳಿದರು.
55 ಪ್ರಮುಖ ರೈಲ್ವೇ ಸ್ಟೇಷನ್ ಗಳು ಮೇಲ್ದರ್ಜೆಗೆ:ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಮಾತನಾಡಿ ಈ ಬಜೆಟ್ನಲ್ಲಿ ನೀಡಲಾದ ಅನುದಾನದಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ, ರಾಜ್ಯದ 55 ಪ್ರಮುಖ ರೈಲ್ವೇ ಸ್ಟೇಷನ್ಗಳು ಮೇಲ್ದರ್ಜೆಗೆ ಏರಿಸಲಾಗುವುದು. ರೈಲ್ವೇ ಇಲಾಖೆಯಿಂದಲೇ ಸ್ಥಳೀಯ ಆಹಾರಗಳನ್ನು ಆದ್ಯತೆ ಮೇರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸ್ಥಳೀಯವಾಗಿ ಫೇಮಸ್ ಆಗಿರುವ ತಿಂಡಿ ತಿನಿಸುಗಳು ರೈಲ್ವೇ ಅಂಗಡಿಗಳಲ್ಲೇ ಅಧಿಕೃತವಾಗಿ ಲಭ್ಯವಾಗಲಿದೆ. ರಾಜ್ಯದ ಹಲವು ಕಡೆಗಳಿಗೆ ಹೊಸ ಮಾರ್ಗಗಳು ಸ್ಥಾಪಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡಿ ಭೂ ಸ್ವಾಧೀನ ಪ್ರಕ್ರಿಯೆ ನೆಡೆಸಲಾಗುವುದು ಎಂದು ಹೇಳಿದರು.
ರಾಜ್ಯದ ರೈಲ್ವೇ ಮಾರ್ಗಗಳ ವಿದ್ಯುದೀಕರಣಕ್ಕೆ 793 ಕೋಟಿ: ಕೇಂದ್ರದ ಬಜೆಟ್ನಲ್ಲಿ ರಾಜ್ಯದ 7 ರೈಲ್ವೇ ಮಾರ್ಗಗಳ ವಿದ್ಯುದೀಕರಣ ಅಭಿವೃದ್ಧಿ ಹಾಗೂ ಮಾರ್ಪಾಡು ಮಾಡಲು ಹಣ ಮೀಸಲಿಡಲಾಗಿದೆ, ಇದಕ್ಕೆ ಕೇಂದ್ರದಿಂದ 793 ಕೋಟಿ ಅನುದಾನದ ನೀಡಲಾಗುತ್ತಿದೆ. ಆದ್ಯತೆಯ ಮೇರೆಗೆ ರಾಜ್ಯದಲ್ಲಿ 10 ಹೊಸ ಮಾರ್ಗಗಳ ಸೇವೆಗಳನ್ನು ಘೋಷಿಸಲಾಗಿದೆ. ರೈಲುಗಳ ಹಳೆಯ ಕೋಚ್ಗಳನ್ನು ಬದಲಾವಣೆ ಮಾಡಿ ಹೈಟೆಕ್ ಕ್ಯಾಬಿನ್ಗಳ ಅಳವಡಿಕೆ ಮಾಡಲಾಗಿದೆ. ಹೈಡ್ರೋಜನ್ ರೈಲು ಕೂಡ ರಾಜ್ಯಕ್ಕೆ ಬರಲಿದೆ ಮೋದಿ ಭರವಸೆ ಕೊಟ್ಟಿದ್ದಾರೆ. ಕೇಂದ್ರ ಬಜೆಟ್ನಲ್ಲಿ ರಾಜ್ಯದ ರೈಲ್ವೇ ಇಲೆಕ್ಟ್ರಿಫಿಕೇಷ್ನ್ಗೆ 790 ಕೋಟಿ ಅನುದಾನ ನೀಡಲಾಗಿದೆ. ರಾಜ್ಯಕ್ಕೆ ಹೊಸ 44 ರೈಲ್ವೇ ಮಾರ್ಗದ ಸರ್ವೇಗೆ 10 ಕೋಟಿ ಮೀಸಲಿಡಲಾಗಿದೆ. ಹೊಸ ಮಾರ್ಗಗಳನ್ನು ಸರ್ವೇ ಮಾಡಿ ಹೊಸ ಮಾರ್ಗ ಸ್ಥಾಪನೆಗೆ ಉತ್ತೇಜೆನ ನೀಡಲಾಗಿದೆ. ಕೇಂದ್ರ ಬಜೆಟ್ ನಲ್ಲಿ ಇದಕ್ಕೆ 10 ಕೋಟಿ ಕೊಡಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನೈರುತ್ಯ ರೈಲ್ವೇ ದೇಶದಲ್ಲೇ ನಂಬರ್ 1:2022ರಲ್ಲಿ ಇಡೀ ದೇಶದಲ್ಲಿ ನೈರುತ್ಯ ರೈಲ್ವೇ ದೇಶದಲ್ಲೇ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಸುರಕ್ಷಿತೆ, ಸೇವೆ, ಸಮಯ ಪಾಲನೆ ಹಾಗೂ ಸ್ವಚ್ಛತೆ ಮಾನದಂಡದಲ್ಲಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಕಳೆದ ವರ್ಷ ನಾವು ಸಾರ್ವಕಾಲಿಕ ಆದಾಯದ ದಾಖಲೆ ಮಾಡಿದ್ದೇವೆ. 5,680 ಕೋಟಿ ಆದಾಯ ಬಂದಿದೆ. 2021ರ ಅವಧಿಯಲ್ಲಿ 4,410 ಕೋಟಿ ರೂಪಾಯಿ ಆದಾಯ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇಕಡಾ 29 ರಷ್ಟು ಆದಾಯ ಗಳಿಕೆ ಹೆಚ್ಚಾಗಿದೆ ಎಂದು ಹೇಳಿದರು.