ಬೆಂಗಳೂರು:ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಅಮಿತ್ ಶಾ ಅವರ ನಾಯಕತ್ವ ಇರುವಾಗ ಯಾವುದೇ ದುಷ್ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಸರ್ಕಾರ ಪಿಎಫ್ಐಗೆ ನಿಷೇಧ ಹೇರಿದ ಬಳಿಕ ತಮ್ಮ ನಿವಾಸದ ಬಳಿ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಪಿಎಫ್‍ಐ ಸಂಘಟನೆಯ ಬಹಳಷ್ಟು ಜನ ಪ್ರಮುಖರು ಗಡಿಯಾಚೆ ಹೋಗಿ ತರಬೇತಿ ಪಡೆದವರಿದ್ದಾರೆ. ಅವರು ಅಲ್ಲಿಂದಲೇ ಕಾರ್ಯಾಚರಣೆ ಮಾಡುತ್ತಿದ್ದು, ಸಂಸ್ಥೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದೆ. ಕರ್ನಾಟಕದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಿರುವುದು ಜಗಜ್ಜಾಹೀರಾಗಿದೆ ಎಂದರು.
ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳ ಜನ ಒಕ್ಕೊರಲಿನಿಂದ ಬೇಡಿಕೆ ಇಟ್ಟಿದ್ದಾರೆ. ವಿರೋಧಪಕ್ಷದವರೂ, ಸಿಪಿಐ, ಕಾಂಗ್ರೆಸ್, ಸಿ.ಪಿ.ಎಂ ಎಲ್ಲರೂ ಕೂಡ ಪಿಎಫ್‍ಐ ನಿಷೇಧಿಸಬೇಕೆಂದು ಬೇಡಿಕೆ ಇಟ್ಟಿದ್ದರು. ನಿಷೇಧಿತ ಸಂಸ್ಥೆಗಳೊಂದಿಗೆ ಯಾರೂ ಸಂಪರ್ಕ ಅಥವಾ ನಂಟನ್ನು ಇಟ್ಟುಕೊಳ್ಳಬಾರದು ಎಂದು ತಿಳಿಸಿದರು.
ಪಿಎಫ್‍ಐ ನಿಷೇಧ ಅತ್ಯಂತ ಸಮರ್ಥ ನಿರ್ಧಾರ ಎಂದ ಕಟೀಲ್:ವಿದೇಶಿ ದೇಣಿಗೆ ಮೂಲಕ ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಪಿಎಫ್‍ಐ ನಿಷೇಧ ಅತ್ಯಂತ ಸಮರ್ಥ ನಿರ್ಧಾರ ಮತ್ತು ಇದು ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪಿಎಫ್‍ಐ ನಾಯಕರು ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿದ್ದರು. ಕೇಂದ್ರ ಸರ್ಕಾರ ಪಿಎಫ್‍ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳವರೆಗೆ ನಿಷೇಧಿಸಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಪಿಎಫ್‍ಐ ನಿಷೇಧ ಅತ್ಯಂತ ಸಮರ್ಥ ನಿರ್ಧಾರ ಎಂದ ಕಟೀಲ್ ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಿ, ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ, ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆ ನಿಷೇಧ ಮಾಡಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ, ಇತರ ಸಹ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಷೇಧ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ವಿದ್ರೋಹಿ ಹಾಗು ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜದ ಒಳಗಡೆ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟೀಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನದ ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರವು ಇಂಥ ಸಮಾಜವಿದ್ರೋಹಿಗಳ ಮೇಲಿನ ಪ್ರಕರಣಗಳನ್ನು ರದ್ದು ಮಾಡಿ ಅವುಗಳ ಬೆಳವಣಿಗೆಗೆ ಸಹಕರಿಸಿತ್ತು. ಇದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ಕೊಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶ ವಿಭಜಕ ಶಕ್ತಿಗಳನ್ನು ಸರ್ಕಾರ ಬ್ಯಾನ್ ಮಾಡಿದೆ ಎಂದ ಸಿ ಟಿ ರವಿ: ದೇಶದ ಒಳಗೆ ಅಭದ್ರತೆ, ಅಂತರ್ಯುದ್ಧದ, ದೇಶದ್ರೋಹದ ಸಂಚನ್ನು ಮಾಡುತ್ತಿದ್ದ ಪಿಎಫ್‍ಐ ಹಾಗು ಅದರ ಸಹ ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ ಹಾಗು ಸರಕಾರವನ್ನು ಅಭಿನಂದಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿಳಿಸಿದರು. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಸರ್ಕಾರ ಈ ಸಂಘಟನೆಗಳನ್ನು ಬ್ಯಾನ್ ಮಾಡಿದೆ. ಇಷ್ಟು ಸಾಕಾಗುವುದಿಲ್ಲ. ಸಮಾಜವು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ. ವಿದ್ರೋಹಿ ಹಾಗು ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜ ಒಳಗಡೆ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟಿಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ದೃಷ್ಟಿಯ ರಾಜಕಾರಣ ಮಾಡಬಾರದು ಎಂದು ತಿಳಿಸಿದ್ದಾರೆ.
ದೇಶ ವಿಭಜಕ ಶಕ್ತಿಗಳನ್ನು ಸರ್ಕಾರ ಬ್ಯಾನ್ ಮಾಡಿದೆ ಎಂದ ಸಿಟಿ ರವಿ ನಿಷೇಧದ ನಂತರ ಪಿಎಫ್‍ಐ ಸಂಘಟನೆಗೆ ಸೇರಿದ ದುಷ್ಟ ಶಕ್ತಿಗಳು ಭೂಗತರಾಗಿ ಕಾರ್ಯನಿರ್ವಹಿಸುವ, ಪ್ರಚೋದಿಸುವ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇಂತಹ ಯಾವುದೇ ಘಟನೆಗಳು ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಕಾನೂನಿನ ಜೊತೆ ಕೈ ಜೋಡಿಸಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ನಿರ್ಧಾರ ಒಂದು ಐತಿಹಾಸಿಕ ಕ್ರಮವಾಗಿದೆ ಎಂದ ನಿರಾಣಿ ಕೇಂದ್ರ ಸರ್ಕಾರದ ನಿರ್ಧಾರ ಒಂದು ಐತಿಹಾಸಿಕ ಕ್ರಮವಾಗಿದೆ ಎಂದ ನಿರಾಣಿ:ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡಿ, ಸಾರ್ವಜನಿಕರ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಪಿಎಪ್ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರ ಒಂದು ಐತಿಹಾಸಿಕ ಕ್ರಮವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಪ್ರಶಂಸಿದ್ದಾರೆ. ಕೇಂದ್ರ ಸರಕಾರ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ನಿಷೇಧ ಕ್ರಮ ಕೈಗೊಂಡಿದೆ. ಇದಕ್ಕಾಗಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿಶ್ ಶಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಚಿವ ನಿರಾಣಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ:Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ