ಕರ್ನಾಟಕ

karnataka

ETV Bharat / state

ವಾಲ್ಮೀಕಿ ಜಯಂತಿಗೆ ಅನುದಾನ ಹೆಚ್ಚಳ: ಜಿಲ್ಲಾ ಕೇಂದ್ರಕ್ಕೆ ₹1.5 ಲಕ್ಷ, ತಾಲ್ಲೂಕು ಮಟ್ಟಕ್ಕೆ ₹35 ಸಾವಿರ - ಈಟಿವಿ ಭಾರತ ಕನ್ನಡ

ವಾಲ್ಮೀಕಿ ಜಯಂತಿ ಆಚರಣೆಗೆಂದು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೀಡಲಾಗುತ್ತಿದ್ದ ಅನುದಾನವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ.

ವಾಲ್ಮೀಕಿ ಜಯಂತಿ ಆಚರಣೆ ಅನುದಾನ ಹೆಚ್ಚಳ
ವಾಲ್ಮೀಕಿ ಜಯಂತಿ ಆಚರಣೆ ಅನುದಾನ ಹೆಚ್ಚಳ

By ETV Bharat Karnataka Team

Published : Oct 12, 2023, 9:57 PM IST

ಬೆಂಗಳೂರು: ವಾಲ್ಮೀಕಿ ಜಯಂತಿ ಆಚರಣೆಗೆ ನೀಡಲಾಗುತ್ತಿದ್ದ ಅನುದಾನ ಹೆಚ್ಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿತು. ಜಿಲ್ಲಾ ಮಟ್ಟದ ಆಚರಣೆಗೆ 1 ಲಕ್ಷದಿಂದ 1.5 ಲಕ್ಷ ರೂ ಹಾಗು ತಾಲ್ಲೂಕು ಮಟ್ಟದ ಆಚರಣೆಗೆ 25 ಸಾವಿರದಿಂದ 35 ಸಾವಿರ ರೂಪಾಯಿ ಅನುದಾನವನ್ನು ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.

ಪ್ರಸಕ್ತ ಸಾಲಿನಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಜ್ಯದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಆಚರಿಸಲು ಪ್ರತಿ ಜಿಲ್ಲೆಗೆ 1.50 ಲಕ್ಷ ಪ್ರತಿ ತಾಲೂಕಿಗೆ 35,000 ರೂಪಾಯಿಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಬಿಡುಗಡೆ ಮಾಡಲು ಸರ್ಕಾರ ಮಂಜೂರಾತಿ ನೀಡಿ ಆದೇಶಿಸಲಾಗಿದೆ. ಈ ವೆಚ್ಚವನ್ನು ಪರಿಶಿಷ್ಟ ಪಂಗಡದ ವಿವಿಧ ಅಭಿವೃದ್ಧಿ ಯೋಜನೆಯ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಒದಗಿಸಿರುವ ಅನುದಾನದಲ್ಲಿ ಭರಿಸಬೇಕು ಎಂದು ಸರ್ಕಾರದ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಆಚರಿಸಲು ನಿರ್ಧರಿಸಲಾಗಿದ್ದು ಈ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. 2017 ಮತ್ತು 18ನೇ ಸಾಲಿನಲ್ಲಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಆಚರಿಸಲು ಪ್ರತಿ ಜಿಲ್ಲೆಗೆ ಒಂದು ಲಕ್ಷ ರೂಪಾಯಿ ಹಾಗೂ ಪ್ರತಿ ತಾಲೂಕಿಗೆ 25,000 ಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಬಿಡುಗಡೆ ಮಾಡಲು ಸರ್ಕಾರದಿಂದ ಮಂಜೂರಾತಿ ನೀಡಲಾಗಿತ್ತು.

ಆದರೆ ಈ ವರ್ಷದ ವಾಲ್ಮೀಕಿ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ನೀಡುತ್ತಿದ್ದ ಅನುದಾನವನ್ನು ಜಿಲ್ಲಾ ಮಟ್ಟಕ್ಕೆ ಒಂದು ಲಕ್ಷದಿಂದ 1.5 ಲಕ್ಷಕ್ಕೆ ಹಾಗೂ ತಾಲೂಕು ಮಟ್ಟದಲ್ಲಿ 25,000 ಗಳಿಂದ 35,000 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.

ಇದನ್ನೂ ಓದಿ:ಯಶಸ್ವಿನಿ ಯೋಜನೆ ಜಾರಿಗೆ ಪ್ರಕ್ರಿಯೆ ಶುರು: ಯಾರು ಅರ್ಹರು? ಸೌಲಭ್ಯ ಪಡೆಯುವುದು ಹೇಗೆ? ಸಂಪೂರ್ಣ ವಿವರ..

ABOUT THE AUTHOR

...view details