ಬೆಂಗಳೂರು: ಪರಿಶಿಷ್ಟ ಜನಾಂಗದ ಶ್ರೇಯಾಭಿವೃದ್ದಿಗಾಗಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಸಾಹಿತಿ ಕಮಲಾ ಹಂಪನಾ, ಓಬಳಪ್ಪ ಹಾಗು ಡಾ ಜಿ.ರಂಗಯ್ಯ ಅವರನ್ನು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಪ್ರತಿಷ್ಠಿತ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ವಿಧಾನಸೌಧದಲ್ಲಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾದ ಗಣ್ಯರ ಹೆಸರುಗಳನ್ನು ಪ್ರಕಟಿಸಿದರು.
ವಿಶ್ರಾಂತ ಕುಲಪತಿಗಳು ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ನಿರಂಜನ್ ಎಸ್. ಆರ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಮೂವರು ಗಣ್ಯರನ್ನು ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿ ವರದಿ ನೀಡಿದ್ದು, ಸರ್ಕಾರ ವರದಿ ಅಂಗೀಕರಿಸಿದೆ. ರಾಜ್ಯ ಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ತಲಾ 20 ಗ್ರಾಂ ಚಿನ್ನದ ಪದಕ ಹಾಗು 5 ಲಕ್ಷ ರೂ ನಗದು ಒಳಗೊಂಡಿರುತ್ತದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಮಾಹಿತಿ ನೀಡಿದರು ಪ್ರಶಸ್ತಿ ವಿಜೇತರ ಹಿನ್ನಲೆ:
ಡಾ. ಕಮಲಾ ಹಂಪನ:
ಕರ್ನಾಟಕದ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದಾರೆ. ನಿರಂತರ ಪರಿಶ್ರಮ, ನಾಡು ನುಡಿಯ ಬಗೆಗಿನ ಅನುಪಮ ಪ್ರೀತಿ ಮತ್ತು ಸಾಹಿತ್ಯಿಕ ಸಾಧನೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ.
ಓಬಳಪ್ಪ:
ನಿವೃತ್ತ ಕೃಷಿ ಅಧಿಕಾರಿಯಾಗಿದ್ದು, ಮಹರ್ಷಿ ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿಯಾಗಿ ಹಾಗು ಹರಿಹರದ ವಾಲ್ಮೀಕಿ ಹಾಸ್ಟೆಲ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಾಲ್ಮೀಕಿ ಸಮಾಜದ ಮಕ್ಕಳಿಗೆ ಶಿಕ್ಷಣದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ, ಉಚಿತ ಶಿಕ್ಷಣ ದೊರಕಿಸಿಕೊಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪರಿಶಿಷ್ಟ ವರ್ಗಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.
ಡಾ. ಜಿ. ರಂಗಯ್ಯ:
ನರರೋಗ ತಜ್ಞರಾಗಿದ್ದು, ನ್ಯೂಯಾರ್ಕ್ ಸಿಟಿ ಮೆಡಿಕಲ್ ಸೊಸೈಟಿ ಅಧ್ಯಕ್ಷರಾಗಿ, ಅಮೆರಿಕಾದ ಇಂಡಿಯನ್ ನ್ಯೂರಾಲಜಿಸ್ಟ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಇಂಡಿಯನ್ ನ್ಯೂರಾಲಜಿಸ್ಟ್ ನ್ಯಾಷನಲ್ ಅಸೋಸಿಯೇಷನ್ ಅಧ್ಯಕ್ಷರಾಗಿ, ನ್ಯೂಯಾರ್ಕ್‍ನ ಪ್ರತಿಷ್ಠಿತ ಸ್ಥಳಗಳಲ್ಲಿ ಸ್ಥಾಪಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯ ಸ್ಥಾಪಕ ಸಮಿತಿ ಸದಸ್ಯರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾಗಿ ಸೇವೆ ಸಲ್ಲಿಸಿದ್ದಾರೆ.