ಬೆಂಗಳೂರು:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ವರ್ಷದ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ನಾಯಕರಿಗೆ ಸಮಯವಿಲ್ಲದಂತಾಗಿದೆಯೇ ಅಥವಾ ನಿರಾಸಕ್ತರಾಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ವಾಜಪೇಯಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಹೊರತುಪಡಿಸಿ ಬೇರೆ ಯಾವ ನಾಯಕರು ಇರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಿಎಂ ಯಡಿಯೂರಪ್ಪ ದೆಹಲಿಯಲ್ಲಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್. ಅಶೋಕ್ ಕೂಡ ದೆಹಲಿಯಲ್ಲಿದ್ದಾರೆ. ಆದರೆ ಇತರೆ ನಾಯಕರು ಇಲ್ಲಿಯೇ ಇರುವ ಬಿಜೆಪಿ ಸಂಸದರು ಬೆಂಗಳೂರಿನ ಅಷ್ಟೂ ಬಿಜೆಪಿ ಶಾಸಕರೂ ಕಾರ್ಯಕ್ರಮದಿಂದ ದೂರ ಉಳಿದಿದ್ದರು.
ಬೆಂಗಳೂರಿನ ಹೊರಗೆ ಇರುವ ನಾಯಕರು ಹೊರತುಪಡಿಸಿದರೂ ಇಲ್ಲಿಯೇ ಇರುವ ನಾಯಕರು ಭಾಗಿಯಾಗಬೇಕಿತ್ತು ಆದರೆ ಅದ್ಯಾವುದೂ ಆಗದೇ ಕೇವಲ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ ಮಾತ್ರ ಪಾಲ್ಗೊಂಡಿದ್ದರು. ಕಳೆದ ವರ್ಷ ವಾಜಪೇಯಿ ಚಿತಾಭಸ್ಮ ಬೆಂಗಳೂರಿಗೆ ತಂದು ರಾಜ್ಯದ ನದಿಗಳಲ್ಲಿ ವಿಸರ್ಜಿಸಿದ್ದ ರಾಜ್ಯ ಬಿಜೆಪಿ ನಾಯಕರು ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಬರಲಿಲ್ಲ. ಬಿಜೆಪಿ ನಾಯಕರಿಗೆ ವಾಜಪೇಯಿ ಪುಣ್ಯಸ್ಮರಣೆ ಬೇಡವಾಯಿತಾ? ಉತ್ಸಾಹ ಕುಗ್ಗಿತಾ? ಎನ್ನುವ ಪ್ರಶ್ನೆ ಎದ್ದಿದೆ.