ಬೆಂಗಳೂರು: ಇಂದು ನಗರದೆಲ್ಲೆಡೆ ಅತ್ಯಂತ ಶ್ರದ್ಧಾ, ಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ ಮಾಡಲಾಯಿತು. ವಿಶೇಷ ಪೂಜೆ, ಪುಷ್ಪಾಲಂಕಾರ, ಭಕ್ತರ ಸಂಭ್ರಮ, ಸಡಗರ, ಪೂಜಾ ವಿಧಿ ವಿಧಾನಗಳು ಹಾಗೂ ವಿವಿಧ ದೇವಾಲಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ತುಂಬಿದ್ದ ಭಕ್ತರಿಂದ ನಗರ ಕಂಗೊಳಿಸಿತು. ವೈಕುಂಠ ಏಕಾದಶಿ ಜೊತೆಗೆ, ಗೀತಾ ಜಯಂತಿಯೂ ಇದ್ದುದರಿಂದ ದೇಗುಲಗಳಲ್ಲಿ ಸಂಭ್ರಮ ಇನ್ನಷ್ಟು ಹೆಚ್ಚಾಗಿತ್ತು.
ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷದಿಂದ ಅಷ್ಟೊಂದು ವಿಜೃಂಭಣೆ, ಭಕ್ತರ ಗುಂಪುಗೂಡುವಿಕೆಯಿಂದ ಗಮನ ಸೆಳೆಯದ ಹಬ್ಬ, ಈ ಸಾರಿ ಅಪಾರ ಸಂಖ್ಯೆಯ ಭಕ್ತರ ಆಗಮನದಿಂದ ಕಳೆಗಟ್ಟಿತ್ತು. ವಿಶೇಷವೆಂದರೆ ಕೋವಿಡ್ ಮಾರ್ಗಸೂಚಿಯನ್ವಯ ಅಂತರ ಕಾಪಾಡಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಕೆಲ ದೇವಾಲಯಗಳಲ್ಲಿ ಸಾಮಾನ್ಯರಿಗೆ, ಹಿರಿಯ ನಾಗರಿಕರಿಗೆ, ಗಣ್ಯರು, ಅತಿ ಗಣ್ಯರಿಗೆ ಪ್ರತ್ಯೇಕ ಸಾಲುಗಳನ್ನು ಮಾಡಲಾಗಿತ್ತು.
ನಗರದೆಲ್ಲೆಡೆ ಹತ್ತಾರು ಶ್ರೀನಿವಾಸ ದೇವಾಲಯಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದರ್ಶನ ಪಡೆದರು, ಪೂಜೆ ಮಾಡಿಸಿದರು. ಎಲ್ಲಿಯೂ ಅಹಿತಕರ ಘಟನೆ, ನೂಕು ನುಗ್ಗಲು ಉಂಟಾದ ಬಗ್ಗೆ ಮಾಹಿತಿ ಇಲ್ಲ.
ಎಲ್ಲೆಲ್ಲಿ ಪೂಜೆ :ಇಸ್ಕಾನ್, ಕೋಟೆ ವೆಂಕಟರಮಣಸ್ವಾಮಿ, ಜೆ.ಪಿ. ನಗರದ ತಿರುಮಲಗಿರಿ ದೇವಸ್ಥಾನ ಸೇರಿದಂತೆ ಕೆಲವು ದೊಡ್ಡ ದೇಗುಲಗಳಲ್ಲಿ ಈ ಬಾರಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಇತರೆಡೆ ಇರುವ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸಾಕಷ್ಟು ದೇವಾಲಯಗಳಲ್ಲಿ ಭಕ್ತರು, ರಾಜಕೀಯ ನಾಯಕರು ಭಕ್ತರಿಗೆ ಸರದಿ ಸಾಲಲ್ಲಿ ಇರುವಾಗಲೇ ಲಡ್ಡು ವಿತರಿಸಿದರು. ಮತ್ತೆ ಕೆಲವರು ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ವಿತರಿಸಿದರು.
ವಿಶೇಷ ನಂಬಿಕೆ :ಧನುರ್ಮಾಸದಲ್ಲಿ ಬರುವ ಈ ಏಕಾದಶಿಯು ವಿಷ್ಣುವು ಯೋಗ ನಿದ್ರೆಯಿಂದ ಎಚ್ಚರಗೊಳ್ಳುವ ದಿನ ಎಂದು ಉಲ್ಲೇಖ ಇದೆ. ದಕ್ಷಿಣ ಭಾರತದಲ್ಲಿ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದರಂತೆ, ವಿಷ್ಣುವಿನ ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ವಿಷ್ಣು ಅಥವಾ ವೆಂಕಟೇಶ್ವರ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಿ, ಆ ಮೂಲಕ ಶ್ರೀಮನ್ನಾರಾಯಣ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.