ಬೆಂಗಳೂರು /ಕೊಪ್ಪಳ: ಬೆಂಗಳೂರಿನಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆ ಅದ್ಧೂರಿ ಆಚರಣೆಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸಾಕಷ್ಟು ನಿರ್ಬಂಧ ಹೇರಿರುವುದರಿಂದ ಭಕ್ತರು ಆನ್‌ಲೈನ್ ಮೂಲಕ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ರಾಜಧಾನಿಯ ಇಸ್ಕಾನ್, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ವೈಯಾಲಿ ಕಾವಲ್ನ ಟಿಟಿಡಿ ಸೇರಿ ಎಲ್ಲ ದೇಗುಲಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಕೋವಿಡ್ ಟೈಟ್ ರೂಲ್ಸ್ನಿಂದ ದೇಗುಲಕ್ಕೆ ಭಕ್ತರು ಪ್ರವೇಶ ಮಾಡುವಂತಿಲ್ಲ. ಭಕ್ತರಿಗೆ ಆನ್‌ಲೈನ್ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಅಭಿಷೇಕ, ಪೂಜೆ, ಅಲಂಕಾರಗಳು ಎಂದಿನಂತೆ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ.
ಇಸ್ಕಾನ್ ದೇಗುಲದಲ್ಲಿ ವಿಶೇಷ ಪೂಜೆ:
ಇಸ್ಕಾನ್ ದೇಗುಲದಲ್ಲಿ ವೈಕುಂಠ ಏಕಾದಶಿ ಆಚರಣೆ ನಡೆಯುತ್ತಿದೆ. ಆದರೆ, ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಮತ್ತು ಸರ್ಕಾರ ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ದೇಗುಲದಲ್ಲಿ ವಿಶೇಷ ಆಹ್ವಾನಿತರಿಗೆ ಮಾತ್ರ ದರ್ಶನದ ಅವಕಾಶವಿದೆ. ಸುರಕ್ಷತೆಯ ಎಲ್ಲ ನಿಯಮಗಳನ್ನು ಪಾಲಿಸಿ ಸ್ಥಾನಿಕ ಭಕ್ತವೃಂದ ಬೆಳಗ್ಗೆ 5.30ಕ್ಕೆ ವೈಕುಂಠ ದ್ವಾರ ತೆಗೆದು ಉತ್ಸವ ಆಚರಿಸುತ್ತಿದೆ. ಇಡೀ ಉತ್ಸವದ ನೇರಪ್ರಸಾರ ದೇವಸ್ಥಾನದ ಅಧಿಕೃತ ಜಾಲತಾಣ (www.iskconbangalore.org) ಮತ್ತು ಇಸ್ಕಾನ್ ಬೆಂಗಳೂರು ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ.