ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ವೈಭವ್ ಜೈನ್, ಇದೀಗ ಪತ್ನಿ ಮೇಲೆ ಹಲ್ಲೆ ನಡೆಸಿ ಮತ್ತೆ ಜೈಲು ಪಾಲಾಗಿದ್ದಾನೆ.
ವೈಯಾಲಿಕಾವಲ್ ನಿವಾಸಿ ಪೂಜಾ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ವೈಭವ್ ಜೈನ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜ್ಯುವೆಲ್ಲರಿ ಶಾಪ್ ಮಾಲೀಕನಾಗಿರುವ ವೈಭವ್, ಈ ಹಿಂದೆ 2020ರ ಆಗಸ್ಟ್ನಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಆತನನ್ನು ಬಂಧಿಲಾಗಿತ್ತು. ನಂತರ ಪೇಜ್-3 ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಆರೋಪದಡಿ ಸಿಸಿಬಿ ಪೊಲೀಸರಿಂದ ಸೆಪ್ಟೆಂಬರ್ನಲ್ಲಿ ವೈಭವ್ ಜೈನ್ ಬಂಧಿಸಲಾಗಿತ್ತು.
ಓದಿ: ಹೆಂಡ್ತಿ ಅಕ್ಕನ ಮೇಲಿನ ಆಸೆಗೆ ಆಕೆಯ ಗಂಡನ ಕೊಂದ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಜೈಲಿನಲ್ಲಿದ್ದಾಗ ಪತಿ ವೈಭವ್ನನ್ನು ಭೇಟಿಯಾಗಲು ಪತ್ನಿ ತೆರಳಿದ್ದಾಗ ಕೊರೊನಾ ಕಾರಣಕ್ಕಾಗಿ ಪತಿಯ ಭೇಟಿಗೆ ಪರಪ್ಪನ ಅಗ್ರಹಾರದ ಜೈಲು ಸಿಬ್ಬಂದಿ ಬಿಟ್ಟಿರಲಿಲ್ಲ. ಇದೇ ತಿಂಗಳು ಫೆಬ್ರವರಿ 9 ರಂದು ಜಾಮೀನು ಪಡೆದು ವೈಭವ್ ಹೊರಬಂದಿದ್ದ. ನಂತರ ಫೆಬ್ರವರಿ 12 ರಂದು ಬೆಳಗ್ಗೆ ಪತ್ನಿ ಉಪಹಾರ ಕೊಟ್ಟಾಗ ವೈಭವ್ ಅವಾಚ್ಯ ಪದಗಳಿಂದ ನಿಂದಿಸಿ ಪತ್ನಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.
ಮನೆಯಲ್ಲಿದ್ದ ಚಿನ್ನಾಭರಣ ಯಾರಿಗೆ ಕೊಟ್ಟಿದ್ದಿಯಾ? ಹಣ ಎಲ್ಲಿಟ್ಟಿದ್ದಿಯಾ? ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಹೇಳಿ, ಹಲ್ಲೆ ನಡೆಸಿ ಹೊರ ನೂಕಿದ್ದಾನೆ ಎಂದು ಹೇಳಲಾಗ್ತಿದೆ. ಸಂಬಂಧಿಯೊಬ್ಬರ ಸಹಾಯದಿಂದ ಪತ್ನಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈಯಾಲಿಕಾವಲ್ ಠಾಣೆಗೆ ತೆರಳಿ ದೂರು ನೀಡಿದ ಮೇರೆಗೆ ವೈಭವ್ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.