ಕರ್ನಾಟಕ

karnataka

By

Published : Aug 25, 2019, 6:47 PM IST

ETV Bharat / state

ಐದು ವರ್ಷದಲ್ಲಿ ಏಳು ಬಾರಿ ತಪ್ಪದೇ ರೋಟಾ ವೈರಸ್​ ಲಸಿಕೆ ಹಾಕಿಸಿ ಮಕ್ಕಳನ್ನ ರಕ್ಷಿಸಿ

ಭಾರತದ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮ ರೋಟಾ ವೈರಸ್ ಲಸಿಕೆಗೆ ನಾಳೆ ಚಾಲನೆ ದೊರೆಯಲಿದ್ದು, ನಮ್ಮ ರಾಜ್ಯದಲ್ಲಿ ರೋಟಾ ವೈರಸ್ ಲಸಿಕೆಯನ್ನು ಈ ವರ್ಷದಿಂದ ಪರಿಚಯಿಸಲಾಗುತ್ತಿದೆ.

ಭಾರತದ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮ ರೋಟಾ ವೈರಸ್ ಲಸಿಕೆಗೆ ನಾಳೆ ಚಾಲನೆ

ಬೆಂಗಳೂರು: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು ಭಾರತದ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮವಾಗಿದ್ದು, ಇದು 2.9 ಕೋಟಿ ಗರ್ಭಿಣಿಯರು ಮತ್ತು 2.67 ಕೋಟಿ ನವಜಾತ ಶಿಶುಗಳ ಗುರಿ ಹೊಂದಿದೆ. ಲಸಿಕಾ ಕಾರ್ಯಕ್ರಮ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಹಲವು ಲಸಿಕೆಗಳನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪರಿಚಯಿಸಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ರೋಟಾ ವೈರಸ್ ಲಸಿಕೆಯನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಪರಿಚಯಿಸಲಿದ್ದು, ನಾಳೆ ಬೆಳಿಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

ಭಾರತದ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮ ರೋಟಾ ವೈರಸ್ ಲಸಿಕೆಗೆ ನಾಳೆ ಚಾಲನೆ

ಏನಿದು ರೋಟಾ ವೈರೆಸ್ ಲಸಿಕೆ..? ಏಕೆ ಲಸಿಕೆ ಹಾಕಿಸಬೇಕು..?

ಮಕ್ಕಳಲ್ಲಿ ರೋಟಾ ವೈರಸ್ ಸೋಂಕನ್ನು ನಿಯಂತ್ರಿಸಲು ರೋಟಾ ವೈರಸ್ ಲಸಿಕೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಅತಿಸಾರ ಭೇದಿಯು ಮಕ್ಕಳ ಮರಣ ಸಂಭವಿಸಲು ಪ್ರಮುಖ ಕಾರಣವಾಗಿದೆ. 5 ವರ್ಷದೊಳಗಿನ ಮಕ್ಕಳು ಶೇ. 5ರಷ್ಟು ಮತ್ತು ಭಾರತದಲ್ಲಿ ಶೇ. 10ರಷ್ಟು ಅತಿಸಾರ ಭೇದಿಯಿಂದ ಸಾವನ್ನಪ್ಪುತ್ತಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ. 40ರಷ್ಟು ಮಕ್ಕಳು ಅತಿಸಾರ ಭೇದಿಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 32.7 ಲಕ್ಷ ಮಕ್ಕಳು ಹೊರರೋಗಿಗಳಾಗಿ ಮತ್ತು 8.72 ಲಕ್ಷ ಮಕ್ಕಳು ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಹಾಗೂ 78,000 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಅಪೌಷ್ಟಿಕತೆ, ನಿಶ್ಯಕ್ತಿ ಮತ್ತು ದೀರ್ಘಕಾಲೀನ ಪೌಷ್ಟಿಕಾಂಶದ ಕೊರತೆಗಳಿಗೆ ಸಹ ರೋಟಾ ವೈರಸ್ ಪ್ರಮುಖ ಕಾರಣವಾಗಿದೆ.


ರೋಟಾವೈರಸ್‌ ಹೇಗೆ ಹರಡುತ್ತದೆ..?

ರೋಟಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ರೋಟಾ ವೈರಸ್ ಅತಿಸಾರದಿಂದ ಬಳಲುತ್ತಿರುವ ರೋಗಿಗಳು ದೊಡ್ಡ ಪ್ರಮಾಣದಲ್ಲಿ ವೈರಸ್​​ಅನ್ನು ಮಲದ ಮೂಲಕ ಹೊರ ಚೆಲ್ಲುತ್ತಾರೆ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕಲುಷಿತವಾದ ನೀರು, ಆಹಾರ ಮತ್ತು ಕೊಳೆಯಾದ ಕೈಗಳ ಸಂಪರ್ಕಕ್ಕೆ ಬರುವುದರಿಂದ faeco Oral ಮಾರ್ಗದಿಂದ ಹರಡುತ್ತದೆ. ಈ ವೈರಾಣು ತುಂಬಾ ಸಮಯದವರೆಗೆ ಮಕ್ಕಳ ಕೈಯಲ್ಲಿ ಮತ್ತು ಇತರ ಗಟ್ಟಿಯಾದ ಮೇಲ್ಪದರಗಳಲ್ಲಿ ಜೀವಂತವಾಗಿರಬಹುದು.

ರೋಟಾ ವೈರಸ್ ಸೋಂಕನ್ನು ಪತ್ತೆ ಹಚ್ಚುವುದು ಹೇಗೆ..? ಚಿಕಿತ್ಸೆ ಏನು..?

ಮೇಲ್ನೋಟಕ್ಕೆ ರೋಟಾ ವೈರಸ್ ಸೋಂಕನ್ನು ಇತರ ಸಾಂಕ್ರಾಮಿಕ ಅತಿಸಾರದಿಂದ ವಿಂಗಡಿಸಲು ಸಾಧ್ಯವಿಲ್ಲ ಮತ್ತು ರೋಟ ವೈರಸ್ ಸೋಂಕು ರೋಗ ನಿರ್ಣಯವನ್ನು ದೃಢೀಕರಿಸಲು ಮಲದ ಪ್ರಯೋಗಾಲಯ ಪರೀಕ್ಷೆ ಅಗತ್ಯವಾಗಿರುತ್ತದೆ. ಮಲದಲ್ಲಿ ರೋಟಾ ವೈರಸ್‌ಅನ್ನು ಪತ್ತೆ ಹಚ್ಚಲು ವಿವಿಧ ಪರೀಕ್ಷೆಗಳು ಲಭ್ಯವಿದೆ. ರೋಟಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯುವ ಏಕೈಕ ನಿರ್ದಿಷ್ಟ ಸಾಧನವೆಂದರೆ ರೋಟಾ ವೈರಸ್ ಲಸಿಕೆ ಹಾಕಿಸುವುದು.

ಯಾರಿಗೆಲ್ಲ ರೋಟಾ ವೈರಸ್ ಲಸಿಕೆ ಹಾಕಿಸಬೇಕು..?

ರೋಟಾ ವೈರಸ್ ಲಸಿಕೆಯನ್ನು ಬಾಯಿಯ ಮೂಲಕ ಮಕ್ಕಳಿಗೆ 6, 10 ಮತ್ತು 14 ವಾರಗಳ ವಯಸ್ಸಿನಲ್ಲಿ ನೀಡಲಾಗುತ್ತೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅಡಿಯಲ್ಲಿ ಎಲ್ಲಾ ಲಸಿಕೆಗಳ ಜೊತೆಯಲ್ಲಿ ರೋಟಾ ವೈರಸ್ ಲಸಿಕೆಯನ್ನು ನೀಡಲಾಗುತ್ತೆ. ರೋಟಾ ವೈರಸ್ ಲಸಿಕೆಯು ತೀವ್ರವಾದ ಮತ್ತು ಮಾರಣಾಂತಿಕ ರೋಟಾ ವೈರಸ್ ಅತಿಸಾರ ಭೇದಿಯಿಂದ ಕಾಪಾಡಲು ಮುಖ್ಯವಾಗಿದೆ. ಭಾರತದಲ್ಲಿ ಮಕ್ಕಳನ್ನು ತೀವ್ರ ಅತಿಸಾರ ಭೇದಿಯಿಂದ ಕಾಪಾಡಲು ರೋಟಾ ವೈರಸ್ ಲಸಿಕೆಯು ಶೇ. 40-60% ಪರಿಣಾಮಕಾರಿಯಾಗಿರುತ್ತದೆ. ಇನ್ನು‌ ಈ ಲಸಿಕೆಯನ್ನು ಮನೆ ಮನೆಗೆ ತೆರಳಿ ನೀಡಲಾಗುವುದಿಲ್ಲ. ಬದಲಾಗಿ ಪೋಷಕರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಾಕಿಸಬೇಕು. ಈ ಲಸಿಕೆಯನ್ನ ಉಚಿತವಾಗಿ ನೀಡಲಾಗುತ್ತದೆ. ಈ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ನಾಳೆ ಚಾಲನೆ ಸಿಗಲಿದೆ.

ABOUT THE AUTHOR

...view details