ಬೆಂಗಳೂರು: ಕೋವಿಡ್ ಲಸಿಕೆ, ರೆಮ್ ಡಿಸಿವಿರ್ ಔಷಧ, ಆಮ್ಲಜನಕ ಪೂರೈಕೆ ಸೇರಿದಂತೆ ಕೋವಿಡ್ ನಿರ್ವಹಣೆಯ ಎಲ್ಲ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಸಮರ್ಪಕ ಸಹಕಾರ ಸಿಗದೆ ರಾಜ್ಯ ಜನರ ಮುಂದೆ ಮಂಡಿಯೂರುವಂತೆ ಮಾಡಿದೆ. ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುವಂತೆ ಮಾಡಿದೆ. ಗಟ್ಟಿ ದನಿಯಲ್ಲಿ ಕೇಂದ್ರವನ್ನು ಕೇಳದ ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯ ನಾಯಕರಿಗೆ ಪ್ರತಿಪಕ್ಷ ನಾಯಕರು ಛೀಮಾರಿ ಹಾಕುತ್ತಿದ್ದರೂ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ.
ಹೌದು, ಕೇಂದ್ರ ಹಾಗು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ, ರಾಜ್ಯಕ್ಕೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎನ್ನುವ ರಾಜ್ಯ ಬಿಜೆಪಿ ನಾಯಕರು ಇದೀಗ ತಮ್ಮದೇ ಸರ್ಕಾರ ಕೇಂದ್ರದಲ್ಲಿದ್ದರೂ ಕೇಂದ್ರಕ್ಕೆ ಯಾವುದೇ ರೀತಿಯ ಒತ್ತಡ ಹೇರುವ, ಒತ್ತಾಯಿಸುವ ಸ್ಥಿತಿಯಲ್ಲಿಲ್ಲ. ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದರೂ ಕೇಂದ್ರದಿಂದ ನೆರವು ಪಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗಟ್ಟಿ ದನಿ ಇಲ್ಲದ ನಾಯಕರಿಂದಾಗಿ ಕೇಂದ್ರದ ಮೇಲೆ ಆರೋಪವನ್ನೂ ಮಾಡದೆ, ರಾಜ್ಯದಲ್ಲಿ ಕೊರೊನಾ ನಿರ್ವಹಣೆಯನ್ನು ಸರಿಯಾಗಿ ಮಾಡಲಾಗದೆ ಅತಂತ್ರ ಸ್ಥಿತಿಗೆ ರಾಜ್ಯದ ಜನತೆಯನ್ನ ನೂಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಲಸಿಕೆ ಅವಾಂತರ:
ಜನವರಿ 16 ರಂದು ದೇಶವ್ಯಾಪಿ ಲಸಿಕೆ ಅಭಿಯಾನ ಆರಂಭವಾಯಿತು. ಅಂದೇ ರಾಜ್ಯದಲ್ಲಿಯೂ ಮೊದಲ ಹಂತದ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿತ್ತು. ಮೊದಲ ಹಂತವಾಗಿ ಹಿರಿಯ ನಾಯಕರಿಕರಿಗೆ ಲಸಿಕೆ ನೀಡಲು ಚಾಲನೆ ನೀಡಲಾಯಿತು. 60 ವರ್ಷದ ನಂತರದವರಿಗೆ ಲಸಿಕೆ ನೀಡಲು ಆರಂಭಿಸಿದ ನಂತರ 45 ವರ್ಷದ ಎಲ್ಲರಿಗೂ ಲಸಿಕೆ ನೀಡುವ ಎರಡನೇ ಹಂತದ ಅಭಿಯಾನ ಶುರುವಾಯಿತು. ಇದೀಗ ಮೇ 1 ರಂದು 18-44 ವಯೋಮಾನದ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಯಿತು. ಆದರೆ ಲಸಿಕೆ ಕೊರತೆ ಕಾರಣಕ್ಕೆ ಮೇ 10 ರಂದು ರಾಜ್ಯದಲ್ಲಿ ಲಸಿಕೆ ನೀಡಿಕೆ ಆರಂಭಿಸಿ ಕೇವಲ ಮೂರೇ ದಿನಗಳಲ್ಲಿ 18-44 ವಯೋಮಾನದವರಿಗೆ ಲಸಿಕೆ ನೀಡಿಕೆಯನ್ನು ಸ್ಥಗಿತಗೊಳಿಸಿ ಆದೇಶಿಸಲಾಗಿದೆ.
ಅಗತ್ಯ ಲಸಿಕೆ ದಾಸ್ತಾನು ಇಲ್ಲದೇ ಇದ್ದರೂ ಲಸಿಕಾ ಅಭಿಯಾನ ಆರಂಭಿಸಿ ಜನರಿಗೆ ಹೆಸರು ನೋಂದಾಯಿಸಲು ಅವಕಾಶ ನೀಡಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಎಸ್ಎಂಎಸ್ ಹಿಡಿದು ಆಸ್ಪತ್ರೆಗಳ ಮುಂದೆ ಬಂದು ಸರದಿ ಸಾಲಿನಲ್ಲಿ ನಿಂತವರು ಇಡೀ ದಿನ ಕಾದರೂ ಲಸಿಕೆ ಸಿಗದೆ ನಿರಾಶರಾಗಿ ಮರಳುವಂತಾಗಿದೆ. ಲಸಿಕಾ ಕೇಂದ್ರಗಳ ಮುಂದೆ ನೋ ಸ್ಟಾಕ್ ಬೋರ್ಡ್ ಜನರನ್ನು ಕೆರಳುವಂತೆ ಮಾಡಿದೆ.
ಈಗಾಗಲೇ ಮೊದಲನೇ ಡೋಸ್ ಪಡೆದುಕೊಂಡಿರುವ ಜನರಿಗೂ ಎರಡನೇ ಡೋಸ್ ಲಸಿಕೆ ಸಿಗದ ಸ್ಥಿತಿ ಎದುರಾಗಿದೆ. ಕೋವ್ಯಾಕ್ಸಿನ್ ಲಸಿಕೆಯಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಅಲ್ಪ ಪ್ರಮಾಣದ ಕೋವಿಶೀಲ್ಡ್ ಲಸಿಕೆಯನ್ನು 45 ವರ್ಷದ ನಂತರದವರಿಗೆ ಮೊದಲ ಡೋಸ್ ಆಗಿ ನೀಡಲಾಗುತ್ತಿದೆ. ಎರಡನೇ ಡೋಸ್ ಪಡೆಯುವವರಿಗೆ ಆಧ್ಯತೆ ಮೇಲೆ ಲಸಿಕೆ ನೀಡಲಾಗುತ್ತಿದೆ.
ಮೂರನೇ ಹಂತದ ಲಸಿಕಾ ಅಭಿಯಾನಕ್ಕೆ ಆಯಾ ರಾಜ್ಯಗಳು ಲಸಿಕೆ ಖರೀದಿ ಮಾಡಬೇಕು ಎನ್ನುವ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರ 1 ಕೋಟಿ ಡೋಸೇಜ್ ಕೋವ್ಯಾಕ್ಸಿನ್ ಮತ್ತು 2 ಕೋಟಿ ಡೋಸೇಜ್ ಕೋವಿಶೀಲ್ಡ್ ಗೆ ಆರ್ಡರ್ ನೀಡಿದೆ. ಆದರೆ ಅದು ಲಭ್ಯವಾಗುವುಕ್ಕೆ ಇನ್ನಷ್ಟು ಸಮಯ ಹಿಡಿಯಲಿದೆ. 45 ವರ್ಷದ ನಂತರದವರಿಗೆ ಲಸಿಕೆ ನೀಡಲು ಅಗತ್ಯ ವ್ಯಾಕ್ಸಿನ್ ಕೊಡಬೇಕಾಗಿರುವುದು ಕೇಂದ್ರದ ಜವಾಬ್ದಾರಿ ಆಗಿದ್ದರೂ ಸರಿಯಾದ ಪ್ರಮಾಣದಲ್ಲಿ ಲಸಿಕೆಯನ್ನು ಸರಬರಾಜು ಮಾಡಿಲ್ಲ, ಪರಿಣಾಮವಾಗಿ ಲಸಿಕೆ ಕೊರತೆ ಸೃಷ್ಟಿಯಾಗಿದೆ. ಎರಡನೇ ಡೋಸ್ ಪಡೆಯಲು ಜನರು ಪರದಾಡುವಂತಾಗಿದೆ.
ಲಸಿಕಾ ಕೇಂದ್ರಗಳ ಮುಂದೆ ಜನರು ಗಲಾಟೆ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನತೆಯ ಸಹನೆಯ ಕಟ್ಟೆ ಒಡೆಯುವ ಹಂತಕ್ಕೆ ತಲುಪುತ್ತಿದೆ.